ಬೆಳ್ತಂಗಡಿ: ನೆರಿಯ ಅಣಿಯೂರು ಹಳ್ಳದ ಖಾಸಗಿ ಕಿರು ಜಲವಿದ್ಯುತ್ ಯೋಜನೆಯಿಂದ ಗುರುವಾಯನಕೆರೆ ಪವರ್ ಗ್ರಿಡ್ ಗೆ ವಿದ್ಯುತ್ ಹರಿಯುವ ವಯರ್ ನಲ್ಲಿ ಮಧ್ಯ ರಾತ್ರಿ ಬೆಂಕಿ ಹೊತ್ತಿ ಉರಿದ ಘಟನೆ ಸೋಮಂತಡ್ಕ ಶಾರದಾ ನಗರ ಅಡೂರು ತಿರುವು ಸನಿಹ ನಡೆದಿದೆ.
ಮೆಸೆಸ್ ಯೆನಪೋಯ ಕಿರು ಜಲವಿದ್ಯುತ್ ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್: ಅತ್ಯಾಧುನಿಕ ಟ್ವಿಸ್ಟೆಡ್ ಕೇಬಲ್ ಮೂಲಕ ನೆರಿಯದಿಂದ ಗುರುವಾಯನಕೆರೆ ಗ್ರಿಡ್ಡ್‌ಗೆ ಪ್ರವಹಿಸುತ್ತಿದೆ. ಈ ವಯರ್ ನಲ್ಲಿ 2 ಗಂಟೆ ರಾತ್ರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಉಂಡೆಗಳು ಕೆಳಬಿದ್ದು ಪೊದೆಗೆ ಬೆಂಕಿ ಹತ್ತಿಕೊಂಡಿತ್ತು. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಲಾರಂಭಿಸಿತು.ಆದರೆ ಕಳೆದ ರಾತ್ರಿ ಮಂಜುಶ್ರೀ ಭಜನಾ ಮಂದಿರದಲ್ಲಿ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ಇದ್ದುದರಿಂದ ರಸ್ತೆಯಲ್ಲಿ ಅಪರಾತ್ರಿಯೂ ಜನ ಸಂಚಾರ ಇತ್ತು. ಪೂಜೆಯಿಂದ ಮನೆಗೆ ಮರಳುತ್ತಿದ್ದ ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ಅವರು ಬೆಂಕಿ ಉರಿಯುತ್ತಿದ್ದುದನ್ನು ಗಮನಿಸಿದ ಇಲಾಖೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಂಡ ಪಕ್ಕದಲ್ಲೇ ಮನ್ನತ್ ಸ್ಕ್ರಾಪ್ ಮತ್ತು ಹಳೆಯ ವಾಹನಗಳ ಬಿಡಿಭಾಗ ಮಾರಾಟದ ವಿಶಾಲ ಶೋರೂಮ್ ಇದ್ದು, ಅಪರಾತ್ರಿ ಬೆಂಕಿಯನ್ನು ಯಾರೂ ನೋಡಿರದಿದ್ದರೆ ಬೆಂಕಿ ವ್ಯಾಪಿಸಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಲ್ಲೇ ಹಿಂದಕ್ಕೆ ಮನೆಗಳು,ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡ ಇತ್ತು.
ವಿಷಯ ಅರಿತ ಸ್ಥಳೀಯರು ಪೊದೆಗೆ ನೀರುಹಾಯಿಸಿ ಬೆಂಕಿ ಹಬ್ಬದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಹೊತ್ತಿ ಉರಿದ ಕೇಬಲ್ ತುಂಡಾಗಿ ಬೇರ್ಪಟ್ಟಿತು. ತಾತ್ರಿಕ ವ್ಯವಸ್ಥೆಯಿಂದಲೋ(ಟ್ರಿಪ್) ಅಥವಾ ವಯರ್ ಸಂಪೂರ್ಣ ಪರಿಣಾಮದಿಂದಲೋ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಬೆಂಕಿ ನಿಂತು ಹೋಯಿತು. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾದ್ಯತೆ ಇತ್ತು.
ಬುಡ ಕಿತ್ತ ಕಂಬಗಳು, ಅಲ್ಲಲ್ಲಿ ಜೋತು ಬಿದ್ದ ಕೇಬಲ: ವಿದ್ಯುತ್ ಸರಬರಾಜು ಮಾರ್ಗದಲ್ಲಿ ಖಾಸಗಿ ಕಂಪೆನಿ ಅಳವಡಿಸಿದ ಕಂಬಗಳು ಕೆಲವೆಡೆ ಬುಡದ ಮಣ್ಣು ಸವಕಳಿಗೊಳಗಾಗಿ ವಾಲಿಕೊಂಡಿದ್ದು ಅಪಾಯದಲ್ಲಿದೆ. ಇನ್ನೂ ಹಲವೆಡೆ ಕೇಬಲ್ ಸಂಪೂರ್ಣ ಜೋತುಬಿದ್ದಿದೆ.
ಟ್ವಿಸ್ಟೆಡ್ ಕೇಬಲ್ ಸುರಕ್ಷಿತ ಎಂಬ ಅರಿವು ಇತ್ತಾದರೂ ಅದು ಉರಿದರೆ ಇಷ್ಟು ಅಪಾಯಕಾರಿ ಎಂದು ಇದುವರೆಗೆ ಯಾರಿಗೂ ಅನುಭವಕ್ಕೆ ಬಂದಿರಲಿಲ್ಲ. ನಿನ್ನೆ ಈ ಘಟನೆ ಆದ ಬಳಿಕ ಜನರಲ್ಲಿ ಹಾಗೂ ವಯರ್ ಹಾದು ಹೋಗುವ ಮಾರ್ಗದುದ್ದಕ್ಕೂ ಜನರಲ್ಲಿ ಭಯ ನಿರ್ಮಾಣವಾಗಿದೆ.
ಅಲ್ಲದೆ ವಿದ್ಯುತ್ ಮಾರ್ಗದುದ್ದಕ್ಕೂ ಪೊದೆಗಳು ವಯರ್‌ನ ಸಮೀಪದವರೆಗೂ ಎದ್ದು ನಿಂತಿದ್ದು ಇನ್ನಷ್ಟು ಅಪಾಯದ ಮುನ್ಸೂಚನೆ ನೀಡಿದೆ. ಕಂಪೆನಿ ಕಡೆಯಿಂದ ಪೊದೆಗಳ ನಿರ್ವಹಣೆಯಾದರೆ ಒಳ್ಳೆದು ಎಂದು ಆಗ್ರಹ ವ್ಯಕ್ತವಾಗಿದೆ