ಬೆಳ್ತಂಗಡಿ: ನಾವೂರು ಶ್ರೀ ಅಯ್ಯಪ್ಪ ಸೇವಾ ಸಮಿತಿಯ 40 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಹಾಗೂ ಹರಿವರಾಸನಂ ಗೀತೆಯ ಶತಾಬ್ದಿ ಕಾರ್ಯಕ್ರಮ ಡಿ.27ರಂದು ನಾವೂರು ಶ್ರೀ ಗುರುಕೃಪಾ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ ಎಂದು ನಾವೂರು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಆಟಿಕುಕ್ಕೆ ಹೇಳಿದರು.
ಅವರು ಡಿ.19 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ನಾವೂರು ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಪ್ರಸ್ತುತ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ ಪಾಠ-ಪಠಣವನ್ನು ನಡೆಸುತ್ತಿದೆ.
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಶ್ರೀ ಗುರುಕೃಪಾ ಭಜನಾ ಮಂದಿರದಲ್ಲಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಗೆ ಅವಿನಾಭವ ಸಂಬಂಧವಿದೆ. 40 ವರ್ಷಗಳ ಇತಿಹಾಸ ಇರುವ ಶ್ರೀ ಅಯ್ಯಪ್ಪ ಸೆವಾ ಸಮಿತಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತತ್ತ ಬಂದಿದೆ. ಇಲ್ಲಿ ಪ್ರತಿ ವರ್ಷವೂ ಸುಮಾರು 50ಕ್ಕಿಂತಲೂ ಹೆಚ್ಚು ಅಯ್ಯಪ್ಪ ವೃತಧಕಾರಿಗಳು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರಸ್ತುತ 40ನೇ “ಹರಿವರಾಸನಂ” ಗೀತೆಯ ಶತಾಬ್ದಿ ಆಚರಣೆ ಜರಗಲಿದೆ. ನಾವೂರಿನ ಸೇಸಪ್ಪ ಮೂಲ್ಯ ಗುರುಸ್ವಾಮಿ ಇವರ 50ನೇ ವರ್ಷದ ಮತ್ತು ಶ್ರೀಧರ ಗುಡಿಗಾರ ಗುರುಸ್ವಾಮಿಯವರ 18ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಪವಿತ್ರವಾದ ಭಕ್ತಿಗೀತೆಯಾದ “ಹರಿವರಾಸನಂ” ಗೀತೆಯ ಶತಾಬ್ದಿ ಆಚರಣೆಯನ್ನು ನಾವೂರಿನಲ್ಲಿ ಮಾಡುವ ಅವಕಾಶ ಬಂದಿದೆ. ಸಂಜೆ ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ಭಜನೆಯ ಮೂಲಕ ಪಾಲಶಕೊಂಬು ಮೆರವಣಿಗೆಯೊಂದಿಗೆ ಶಬರಿಮಲೆ ಪಂದಳ ರಾಜ ಶಶಿಕುಮಾರ ವರ್ಮ ಹಾಗೂ ಅವರ ಧರ್ಮಪತ್ನಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಡಾ. ಪ್ರದೀಪ್ ಆಟಿಕುಕ್ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಅಧ್ಯಕ್ಷ ಗಣೇಶ್ ಪೊದುವಾಳ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉದ್ಯಮಿ ಶಶಿಧರ ಬಿ. ಶೆಟ್ಟಿ ನವ ಶಕ್ತಿ, ಪ್ರಾಂತ ಸಹ ಕಾರ್ಯಪಾಲ ಪ್ರಕಾಶ್ ಪಿ. ಎಸ್., ಪಂಚಾಯತ್ ಅಧ್ಯಕ್ಷೆ ಸುನಂದಾ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯಾನ್, ನಿಕಟ ಪೂರ್ವಅಧ್ಯಕ್ಷಎ. ಬಿ. ಉಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಾವೂರು ಸೇಸಪ್ಪ ಮೂಲ್ಯ ಗುರುಸ್ವಾಮಿ ಮತ್ತು ತೋಟತ್ತಾಡಿ ರವಿ ಗುರುಸ್ವಾಮಿ ನೇತೃತ್ವದಲ್ಲಿ ಬೇಳಿಗ್ಗೆ 7.30ಕ್ಕೆ ಗಣಹೋಮ, ಮದ್ಯಾಹ್ನ 12.00ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ‘ಶಿವದೂತೆ ಗುಳಿಗೆ” ತುಳು ಯಕ್ಷಗಾನ ಬಯಲಾಟ ನಡೆಯಲಿದೆ. 28ರಂದು ಬೆಳಿಗ್ಗೆ 3.00ಗಂಟೆಗೆ ದೇವಿದರ್ಶನ, 4.00 ಗಂಟೆಗೆ ಅಗ್ನಿ ಸೇವೆ ನಡೆಯಲಿದೆ. 6.00ಗಂಟೆಗೆ ಮಹಾಪೂಜೆ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಾರ್ಯದರ್ಶಿ ಹರೀಶ್ ಕಾರಿಂಜ, ಗುರು ಸ್ವಾಮಿ ಶ್ರೀಧರ ಗುಡಿಗಾರ, ಕುಂಜಿರ ಗುರುಸ್ವಾಮಿ ಚಾರ್ಮಾಡಿ,ನಾವೂರು ಗ್ರಾ. ಪ. ಮಾಜಿ ಅಧ್ಯಕ್ಷ ಗಣೇಶ್ ನೆಲ್ಲಿಪಲ್ಕೆ, ಗೋಪಾಲಕೃಷ್ಣ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಉದಯ ಬಂಗೇರ ನಾವೂರು ಉಪಸ್ಥಿತರಿದ್ದರು.