ವೇಣೂರು: ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಇಂದಿನ ಕಾಲಘಟ್ಟದಲ್ಲಿ ಚಿಕಿತ್ಸೆ ಲಭಿಸದೆ ಅಥವಾ ವಿಳಂಬವಾಗಿ ಜೀವಕ್ಕೆ ತೊಂದರೆ ಉಂಟಾಗಿದೆ ಅನ್ನುವಂತಾಗಬಾರದು. ಕ್ಷುಲ್ಲಕ ಕಾರಣಗಳಿಗೆ ಚಿಕಿತ್ಸೆ ಸಿಗಲು ವಿಳಂಬ ಆಗಿ ತೊಂದರೆ ಉಂಟಾಗುತ್ತಿರುವುದು ದೊಡ್ಡ ದುರಂತ. ಕಾಲಕಾಲಕ್ಕೆ ಹೃದಯದ ತಪಾಸಣೆ ಮಾಡಿ ತೊಂದರೆಗೆ ಒಳಗಾಗದೆ ಚಿಕಿತ್ಸೆ ಲಭಿಸುವಂತಾಗಲಿ, ಸಕಾಲದಲ್ಲಿ ಚಿಕಿತ್ಸೆ ದೊರೆತಾಗ ಜೀವ ಉಳಿಯಲು ಸಾಧ್ಯವಾಗುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ಹೇಳಿದರು.
ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಜನಮಂಗಲ ಕಾರ್ಯಕ್ರಮದ ಅಂಗನವಾಗಿ ಡಿ.17ರಂದು ನಡೆದ ಉಚಿತ ಬೃಹತ್ ವೈದ್ಯಕೀಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ದೇಶದಲ್ಲೇ ಅತೀ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಜಿಲ್ಲೆ ನಮ್ಮದು. ಇಂದು ಪ್ರತೀ ನಗರಗಳಲ್ಲಿ ಆಸ್ಪತ್ರೆಗಳಿವೆ. ಸೂಕ್ತವಾದ ಸಮಯದಲ್ಲಿ ದೇಹದ ತಪಾಸಣೆ ಮಾಡುತ್ತಿರಬೇಕು. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷ ವಿ. ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ| ದೀಪಕ್ ಮಡಿ, ಡಾ| ಆತ್ಮಾನಂದ ಹೆಗ್ಡೆ, ಡಾ| ಶೌರ್ಯ ಬ್ಯಾನರ್ಜಿ, ಡಾ| ದಿತೇಶ್ ಎಂ., ಕೋಟಕಲ್ ಆರ್ಯವೈದ್ಯ ಶಾಲಾ ಡಾ| ಶಂಕರಣ್ ನಂಬೂದಿರಿ, ಮೂಡಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್‌ನ ಪಿಆರ್‌ಒ ರಾಜೇಶ್ ರಾವ್, ವೆನ್ಲಾಕ್ ಆಸ್ಪತ್ರೆ ಜೀವಸಾರ್ಥಕತೆ ಇದರ ಜಿಲ್ಲಾ ಸಂಯೋಜಕಿ ಪದ್ಮಾ ಮುದ್ದಾಡಿ, ಶಿಬಿರದ ಸಂಘಟಕರಾದ ಡಾ| ಶಾಂತಿಪ್ರಸಾದ್, ಡಾ| ಜಗದೀಶ್ ಚೌಟ್, ಡಾ| ಪ್ರೌಷ್ಠಿಲ್ ಅಜಿಲ, ಡಾ| ಆಶೀರ್ವಾದ್, ವಿವಿಧ ಸಮಿತಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ವಂದಿಸಿದರು.