Site icon Suddi Belthangady

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ- ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯ ಕೊಲ್ಲಾಜೆ- ಪತ್ರಿಕಾ ಗೋಷ್ಠಿ

ಬೆಳ್ತಂಗಡಿ: ಯಾವುದೇ ಸರಕಾರ ಕೃಷಿಕರಿಗೆ ಪ್ರೋತ್ಸಾಹ ನೀಡಲು ವಿಫಲವಾಗಿದ್ದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರೈತರನ್ನು ಒಗ್ಗೂಡಿಸುವ ಸಲುವಾಗಿ ತಾಲೂಕು, ಗ್ರಾಮ ಮಟ್ಟದಲ್ಲಿ ರೈತ ಸಂಘಟನೆಯನ್ನು ಕಟ್ಟಲಾಗುವುದು ಎಂದು ಯುವ ಘಟಕದ ರಾಜ್ಯ ಸಂಚಾಲಕ ಆದಿತ್ಯ ಕೊಲ್ಲಾಜೆ ತಿಳಿಸಿದರು.

ಅವರು ಡಿ.16 ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೈತ ಸಂಘಟನೆಯ ಯುವ ಘಟಕ, ಮಹಿಳಾ ಘಟಕವನ್ನು ಸ್ಥಾಪಿಸಲಾಗುವುದು‌.ಆ ಮುಖೇನಾ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ರೈತ ಸಂಘಟನೆಯಿಂದ ಮಾಡಲಾಗುವುದು.ಡಿ.21 ರಂದು ಬೆಳ್ತಂಗಡಿಯಲ್ಲಿ ರೈತ ಸಂಘದ ತಾಲೂಕು ಸಮಿತಿ ರಚನೆಯಾಗಲಿದೆ.ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರರವರು ಬೆಳ್ತಂಗಡಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಅವರಿಂದ ರೈತ ಸಂಘದ ಹುಟ್ಟು, ಸಾಗಿಬಂದ ದಾರಿ ಮುಂದೆ ಸಾಗಲಿರುವ ಕುರಿತು ದಿಕ್ಸೂಚಿ ಕಾರ್ಯಗಾರ ನಡೆಯಲಿದೆ ಎಂದರು.

ದ.ಕ ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಮಾತನಾಡಿ ಬೆಳ್ತಂಗಡಿ ತಾಲೂಕಿನ ಪ್ರತಿ ಗ್ರಾಮ‌ ಮಟ್ಟದಲ್ಲೂ ಸಮಿತಿ ರಚಿಸಿ ರೈತರಿಗೆ ಕೃಷಿ ಉತ್ಪಾದನೆ, ಮೌಲ್ಯ ವರ್ಧನೆ,ಮಾರುಕಟ್ಟೆ ಪರಿಸರ ಸಂರಕ್ಷಣೆ, ತಾಂತ್ರಿಕರಣದ ಬಳಕೆ, ಕಡಿಮೆ ಉತ್ಪಾದನಾ ವೆಚ್ಚದ ಮೂಲಕ ಸುಸ್ಥಿರ ಕೃಷಿ ಬದುಕು, ಆರ್ಥಿಕ ಸಬಲೀಕರಣದ ಮೂಲಕ ಯುವ ಜನತೆಯನ್ನು ಕೃಷಿಯಲ್ಲಿಯೇ ಮತ್ತೆ ತೊಡಗಿಸುವ ಉದ್ದೇಶದಿಂದ ರೈತ ಸಂಘ ರಚನೆಯಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ, ಬೆಳ್ತಂಗಡಿ ತಾಲೂಕು ಸಂಚಾಲಕ ಚಿದಾನಂದ ಹಾಜರಿದ್ದರು.

Exit mobile version