Site icon Suddi Belthangady

ಉರುವಾಲುಪದವು ಕನ್ನಡ ಶಾಲೆ ಉಳಿಸಲು ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುವಾಲು ಗ್ರಾಮದ ಉರುವಾಲುಪದವಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವಂತೆ ಒತ್ತಾಯಿಸಿ ಎರಡನೇ ಬಾರಿಗೆ ಪ್ರತಿಭಟನೆ ಡಿ.13ರಂದು ನಡೆಯಿತು.

ಕುಪ್ಪೆಟ್ಟಿಯಿಂದ ಉರುವಾಲುಪದವು ತನಕ ಮೆರವಣಿಗೆಯಲ್ಲಿ ಬಂದು ಶಾಲಾ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾ ಸಭೆಯನ್ನುದ್ದೇಶಿಸಿ ಶಾಲೆಯ ಹಳೆ ವಿಧ್ಯಾರ್ಥಿಗಳಾದ ಅಬ್ಬಾಸ್ ಪಾಲೆತ್ತಡಿ ಮತ್ತು ನಿಝಾಂ ಶುಂಠಿಪಳಿಕೆ ಅವರು ಮಾತನಾಡಿ ನಮ್ಮ ಹಿರಿಯರು ಕಷ್ಟ ಪಟ್ಟು ಕಟ್ಟಿ ಬೆಳೆಸಿ ಉಳಿಸಿದ ಕನ್ನಡ ಮಾಧ್ಯಮ ಶಾಲೆಯನ್ನು ನಿರ್ಲಕ್ಷ ಮಾಡಿ ಆಂಗ್ಲ ಮಾಧ್ಯಮ ಶಾಲೆ ನಡೆಸಿ ವಿದ್ಯಾರ್ಥಿಗಳ ಪೋಷಕರಿಂದ ಹಣ ಪಡೆದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿದ್ದಾರೆ.ಸುಮಾರು 300ರಿಂದ 400ರವರೆಗೆ ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 36 ವಿದ್ಯಾರ್ಥಿಗಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿರುವುದು ಖೇದಕರವಾಗಿದೆ ಎಂದರು.ಆಂಗ್ಲ ಮಾಧ್ಯಮ ಶಾಲೆಯ ಅಭಿವೃದ್ಧಿಗೆ ಮಾತ್ರ ಶ್ರಮಿಸುತ್ತಿರುವ ಇಲ್ಲಿಯ ಸಮಿತಿಯವರು ಕನ್ನಡ ಮಾಧ್ಯಮ ಶಾಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಖಂಡನೀಯ ಎಂದ ಅವರು ಮುಂದಿನ ದಿನಗಳಲ್ಲಿ ಸದ್ರಿ ಶಾಲೆಯನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಬಿಟ್ಟು ಕೊಡಬೇಕು. ಸರಕಾರಿ ಕನ್ನಡ ಮಾಧ್ಯಮ ಶಾಲೆ ನಮ್ಮೂರಿನಲ್ಲಿ ಉಳಿಯಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್ ಮುಖಂಡ ರವಿಕೃಷ್ಣ ರೆಡ್ಡಿ, ರಘುಪತಿ ಭಟ್, ಪ್ರವೀಣ್ ಪಿರೇರಾ, ಯಶೋದ, ಪ್ರಕಾಶ್, ಸೂಸಿ ರಝಾರಿಯೋ ಮತ್ತು ಜಯಾನಂದ ಬಜ್ಪೆ ಮಾತನಾಡಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಸಿದ್ದೀಕ್, ಸಿಹಾಬ್, ಅಶ್ರಫ್, ಜಾಫರ್, ಸಲೀಂ, ಲತೀಫ್, ಯಾಕೂಬ್, ಹಮೀದ್, ಶಕೀರ್, ನಿಝಾರ್, ಹಂಝ, ರಹೀಂ ಸಖಾಫಿ, ಕಾಸಿಂ, ಪೀರ್ಯ ಮುಹಮ್ಮದ್, ಜಯಂತ, ರವಿ, ಸಮಿತ್ ಸೇರಿದಂತೆ ಹಳೇ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು, ಪೋಷಕರು ಹೋರಾಟದಲ್ಲಿ ಭಾಗವಹಿಸಿದ್ದರು.

ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್.ಐ. ರಾಜೇಶ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Exit mobile version