ಉಜಿರೆ: ಸಾಮಾಜಿಕ ಕಳಕಳಿಯುಳ್ಳ ಸೇವಾಭಾರತಿ ಸಂಸ್ಥೆ ಇನ್ನಷ್ಟು ಸಶಕ್ತವಾದಾಗ ಮತ್ತಷ್ಟು ಅರ್ಹ ವಿಕಲಚೇತನರು ಬದುಕು ಕಟ್ಟಿಕೊಳ್ಳುವಂತಾಗುತ್ತದೆ.ಅದು ವಿಕಲಚೇತನರ ಬಾಳಿಗೆ ಬೆಳಕಾಗಿ ಜೀವನ ಪರ್ಯಂತ ಅವರು ಸಂಸ್ಥೆಗೆ ಋಣಿಯಾಗಿರುತ್ತಾರೆ.ಬೆನ್ನುಮೂಳೆ ಮುರಿತಕ್ಕೊಳಗಾದವರ ಬದುಕು ಹಸನಾಗಲು ಸೇವಾಧಾಮ ಆರೋಗ್ಯಧಾಮವಾಗಿ ಬದುಕಿನಲ್ಲಿ ಭರವಸೆ ಮೂಡಿಸಿದೆ.ಸಮಾಜ ಸೇವಾ ಕಾರ್ಯದಲ್ಲಿ ಸೇವಾಭಾರತಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಎಲ್ಲರ ಸಹಕಾರವಿರಲಿ ಎಂದು ಬೆಂಗಳೂರಿನ ಕೋಂಸ್ಕೋಪ್ ಸಾಫ್ಟ್ ವೇರ್ ಇಂಜಿನೀಯರಿಂಗ್ ಕಂಪನಿ ನಿರ್ದೇಶಕ ವೀರೇಂದ್ರ ಸಿಂಗ್ ನುಡಿದರು.
ಅವರು ಸೇವಾಭಾರತಿ ಸಂಸ್ಥೆಯ 19ನೇ ವರ್ಷದ ಸಂಭ್ರಮ (2022-33) ಪ್ರಯುಕ್ತ ಬೆಂಗಳೂರಿನ ಕೋಂಸ್ಕೋಪ್ ನಿಂದ ಕೇಂದ್ರ ಮತ್ತು ಸಮುದಾಯಕ್ಕೆ ಉಪಕರಣಗಳ ಹಸ್ತಾಂತರ ಮತ್ತು ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಡಿ.3ರಂದು ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸೇವಭಾರತಿಯ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕ ಕೆ.ವಿನಾಯಕ ರಾವ್ ಪ್ರಸ್ತಾವಿಸಿ ಸೇವಾಭಾರತಿ ಕಳೆದ 19 ವರ್ಷಗಳಲ್ಲಿ ಅರೋಗ್ಯ, ಮಹಿಳಾ ಸಬಲೀಕರಣ, ಸ್ವ ಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರದಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗು ಸಮುದಾಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತದೆ.ಆರೋಗ್ಯ ಯೋಜನೆಯಡಿ ರಕ್ತದಾನ ಶಿಬಿರ ಹಾಗು ರಿಯಾಯತಿ ದರದಲ್ಲಿ ಅಂಬ್ಯುಲೆನ್ಸ್ ಸೇವೆ, ಸಬಲಿನೀ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರಗಳ ಆಯೋಜನೆ, ಸೇವಾಧಾಮದ ಮೂಲಕ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪುನಸ್ಚೇತನ ನೀಡುವ ಕಾರ್ಯದಲ್ಲಿ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದು ಸೇವಾ ಕಾರ್ಯವನ್ನು ನೆರೆಯ 7 ಜಿಲ್ಲೆಗಳಿಗೆ ವಿಸ್ತರಿಸುತ್ತಿದೆ.
ಕಳೆದ ಆರ್ಥಿಕ ವರ್ಷದಲ್ಲಿ 178 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, 31 ಮಂದಿ ದಿವ್ಯಾಂಗರನ್ನು ಪುನಸ್ಚೇತನಗೊಳಿಸಿದೆ.81 ಮಂದಿಗೆ ಗಾಲಿಕುರ್ಚಿ ಮತ್ತು 41 ಮಂದಿಗೆ ಜೀವನೋಪಾಯದ ವಿವಿಧ ಸೌಲಭ್ಯಗಳನ್ನು ವಿತರಿಸಿ ನೆರವಾಗಿದೆ ಎಂದರು.ಬೆಂಗಳೂರು ಕೋಂಸ್ಕೋಪ್ ಕಂಪನಿಯ ಟ್ರೇಡ್ ಕಂಪ್ಲೆಯನ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ನವೀನ್ ವಜ್ರವೇಲು ಶುಭಾಶಂಸನೆಗೈದರು.ಬೆಂಗಳೂರು ಕೋಂಸ್ಕೋಪ್ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ಮುರಳಿ ಜಯರಾಮ್, ಕೋಂಸ್ಕೋಪ್ ಕಂಪನಿಯ ಬ್ಯುಸಿನೆಸ್ ಆಪರೇಷನ್ ವಿಭಾಗದ ಸೂಪರ್ ವೈಸರ್ ಚೇತನ್ ಕಾರೆ ಶುಭ ಹಾರೈಸಿದರು.ಸೇವಾಧಾಮದ ಸಂಚಾಲಕ ಕೆ ಪುರಂದರ ರಾವ್ ಸಂಸ್ಥೆಯ ಬಗ್ಗೆ ಹಿತ ನುಡಿಗಳನ್ನಾಡಿದರು.ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ ಅಧ್ಯಕ್ಷತೆ ವಹಿಸಿ ಕೋಂಸ್ಕೋಪ್ ಕಂಪೆನಿಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ 2022-23 ರ ವಾರ್ಷಿಕ ವರದಿಯ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸಿ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.ಕೆನರಾ ಬ್ಯಾಂಕ್ ಕೊಕ್ಕಡ ಶಾಖೆಯ ಮ್ಯಾನೇಜರ್ ಅಂಕಿತ್ ಸಿಂಗ್, ಉಡುಪಿ ಧಾನ್ಯಲಕ್ಷ್ಮೀ ರೈಸ್ ಮಿಲ್ ಮಾಲೀಕ ಮಧ್ವಮೂರ್ತಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಕೊಕ್ಕಡ ಪ್ರಾ.ಕ್ರ.ಪ.ಸಹಕಾರಿ ಸಂಘದ ಅಧ್ಯಕ್ಷ ಹಾಗು ಬೆಲ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.
ಉಪಕರಣಗಳ ಹಸ್ತಾಂತರ: ಕೋಂಸ್ಕೋಪ್ ಕಂಪನಿಯ ಸಿ ಎಸ್ ಆರ್ ಯೋಜನೆಯಡಿ ಒದಗಿಸಲಾದ ಉಪಕರಣಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಬೆನ್ನುಹುರಿ ಅಪಘಾತಕ್ಕೊಳಗಾದ ಫಲಾನುಭವಿಗಳಿಗೆ 15 ಗಾಲಿಕುರ್ಚಿ, 5 ಗಾಳಿ ಹಾಸಿಗೆ, 5 ನೀರಿನ ಹಾಸಿಗೆ, 6 ಕೊಮೊಡ್ ಗಾಲಿಕುರ್ಚಿ, 1 ನಿಯೋ ಬೋಲ್ಟ್ ವಿತ್ ಫ್ಲೈ, 25 ಮೆಡಿಕಲ್ ಕಿಟ್ ಹಾಗೂ 50 ಸೆಲ್ಫ್ ಕೇರ್ ಕಿಟ್ ಗಳನ್ನು ಗಣ್ಯ ಅತಿಥಿಗಳು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮವನ್ನು ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಮತ್ತು ಡಾಕ್ಯುಮೆಂಟೇಷನ್ ಸಂಯೋಜಕಿ ಅಪೂರ್ವ ಪಿ ವಿ ನಿರೂಪಿಸಿದರು.ಸೇವಾಭಾರತಿ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಧನ್ಯವಾದವಿತ್ತರು. ಸಂಜೆ ಕನ್ಯಾಡಿಯ ಸೇವಾಭಾರತಿ ಕಚೇರಿ ಸೇವಾನಿಕೇತನದಲ್ಲಿ ಪ್ರತಿವರ್ಷದಂತೆ ಅರ್ಚಕ ವೇದಮೂರ್ತಿ ವಾದಿರಾಜ ಶಬರಾಯ ಅವರ ಪೌರೋಹಿತ್ಯದಲ್ಲಿ ಆಶ್ಲೇಷ ಬಲಿ ಹಾಗೂ ಶ್ರೀ ದುರ್ಗಾ ಪೂಜೆ ನಡೆಯಿತು.