Site icon Suddi Belthangady

ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ- ಅಂತರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ: ಕೃತಕ ಬುದ್ಧಿಮತ್ತೆಯಿಂದ ನೈತಿಕಮೌಲ್ಯ ಮತ್ತು ಸಾಮಾಜಿಕ ಜೀವನಕೌಶಲಗಳ ಉದ್ದೀಪನದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು.

ಅವರು ಡಿ.4ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ “ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ’ ಎಂಬ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಉದ್ಯೋಗಾವಕಾಶದ ದೃಷ್ಟಿಯಿಂದ ಕೃತಕಬುದ್ಧಿಮತ್ತೆ ಅವಶ್ಯಕವಾದರೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಧನೆ ಮತ್ತು ಪ್ರಗತಿಯ ಹೆಸರಿನಲ್ಲಿ ನಮ್ಮ ಸಹಜವಾದ ಬುದ್ಧಿಮತ್ತೆಯನ್ನು ಕಡೆಗಣಿಸಬಾರದು. ಕೃತಕ ಬುದ್ಧಿಮತ್ತೆ ಅಣುಬಾಂಬಿನಷ್ಟೆ ಅಪಾಯಕಾರಿಯಾಗಿದೆ.ಇದರ ಬಳಕೆಯಿಂದ ಒಳಿತುಗಳೂ, ಕೆಡುಕುಗಳೂ ಇವೆ. ಹೆಚ್ಚು ಕಲಿತವರು ಬುದ್ಧಿವಂತರು ಎಂಬ ನಂಬಿಕೆ ಇದೆ. ಆದರೆ ಬುದ್ಧಿವಂತರಾದ ಪ್ರತಿಭಾವಂತರು ಹೃದಯ ಶ್ರೀಮಂತಿಕೆಯನ್ನೂ ಹೊಂದಿರಬೇಕು. ಪರೋಪಕಾರ, ಕರುಣೆ, ಸೇವೆ, ಪ್ರೀತಿ-ವಿಶ್ವಾಸ, ದಯೆ, ಮಾನವೀಯತೆ ಮೊದಲಾದ ನೈತಿಕಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಆಧುನಿಕ ಜಗತ್ತಿನಲ್ಲಿ ಉನ್ನತ ಶಿಕ್ಷಣ ಪಡೆದವರು ಧರ್ಮ, ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಮೊದಲಾದವುಗಳಿಂದ ವಿಮುಖವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.

ಮನೋವಿಜ್ಞಾನ ವಿಭಾಗದ ಗೃಹ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ., ಮಾತನಾಡಿ, ಕೃತಕ ಬುದ್ಧಿಮತ್ತೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಮತ್ತು ಮಹತ್ವ ಹೊಂದಿದರೂ ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಪ್ರವೃತ್ತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ. ಕೃತಕ ಬುದ್ಧಿಮತ್ತೆಯ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಪರಿಶೀಲಿಸಿ ಬದುಕಿನ ಸಮಸ್ಯೆಗಳ ಸೌಹಾರ್ದಯುತ ಪರಿಹಾರಕ್ಕಾಗಿ ಅದನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಮಾತನಾಡಿ, ನಾವು ಬೆಳೆದ ಪರಿಸರ, ವಂಶಪರAಪರೆ, ಶಿಕ್ಷಣ, ಸಾಮಾಜಿಕ ಸಂಪರ್ಕ ಮೊದಲಾದ ಹಲವು ಅಂಶಗಳ ಪ್ರಭಾವದಿಂದ  ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯಿಂದ ನಮ್ಮ ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳು ಕುಂಠಿತವಾಗದಂತೆ ಎಚ್ಚರಿಕೆವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ವಿಚಾರ ಸಂಕಿರಣ ಸಂಘಟಕರಾದ ಡಾ. ವಂದನಾ ಜೈನ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಅಶ್ವಿನಿ, ಎಚ್. ಧನ್ಯವಾದವಿತ್ತರು.
ಪ್ರಾಧ್ಯಾಪಕಿಯರಾದ ಅಶ್ವಿನಿ ಶೆಟ್ಟಿ ಮತ್ತು ಸೋನಿಕಾ ಕಾರ್ಯಕ್ರಮ ನಿರ್ವಹಿಸಿದರು.

ಡಿ.4 ಮತ್ತು ಡಿ.5ರಂದು ನಡೆಯುವ ವಿಚಾರ ಸಂಕಿರಣದಲ್ಲಿ ದೇಶ-ವಿದೇಶಗಳಿಂದ 250 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

Exit mobile version