ಉಜಿರೆ: ಇಲ್ಲಿನ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಮಾನವ ನಡವಳಿಕೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ ಎಂಬ ವಿಚಾರದ ಕುರಿತು ಡಿ.4 ಹಾಗೂ 5ರಂದು ಎರಡು ದಿನಗಳ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡಿಯಲಿದೆ.
ಡಿ.5ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ವಾನಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ|ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಉಪಸ್ಥಿತರಿರುವರು.
ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣ, ಸಂಜೆ ಗಂಟೆ 6.30ರಿಂದ ಖ್ಯಾತ ಗಾಯಕಿ ಅನುರಾಧ ಭಟ್ ಅವರಿಂದ ‘ರಂಗ ಸಂಜೆ’ ಕಾರ್ಯಕ್ರಮ ನಡೆಯಲಿದೆ.
ಡಿ.5ರಂದು ಬೆಳಿಗ್ಗೆ 1ಗಂಟೆಯಿಂದ ವಿಚಾರ ಸಂಕಿರಣ ಮುಂದುವರಿಯಲಿದ್ದು, ಸಂಜೆ 3.30ಕ್ಕೆ ಜರಗುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಫಿನ್‌ಲ್ಯಾಂಡ್‌ನ ಟ್ಯಾಂಪೆರೆ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕ ಡಾ.ನೋಣಪ್ಪ ನೆರವೇರಿಸುವರು.
ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ, ಬೆಂಗಳೂರು ಎಸ್ ಡಿ ಎಂ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್, ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್. ಎನ್. ಕಾಕತ್ಕರ್ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಚಾಲಕಿ ಡಾ.ವಂದನಾ ಶೆಟ್ಟಿ ಹಾಗೂ ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.