ಬೆಳ್ತಂಗಡಿ: ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎಂಬವರಿಗೆ ಚಿಕ್ಕಮಗಳೂರು ಪೊಲೀಸರು ಹಲ್ಲೆ ನಡೆಸಿ ನಂತರ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕ ನಡೆಸಿದ ಹಲ್ಲೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘ ಖಂಡಿಸಿ ಹಲ್ಲೆ ಮತ್ತು ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಅಗ್ರಹಿಸಿ ಬೆಳ್ತಂಗಡಿ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ವಕೀಲ ಸಮುದಾಯದ ಮೇಲೆ ಈ ರೀತಿಯ ಹಲ್ಲೆ ಮತ್ತು ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥ ಪೊಲೀಸರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಘಟನೆಯನ್ನು ಖಂಡಿಸಿ ಹಿರಿಯ ವಕೀಲ ಸಂಘದ ಚಯರ್ ಮೆನ್ ಅಲೋಸಿಯಸ್ ಎಸ್.ಲೋಬೊ, ಹಿರಿಯ ವಕೀಲ ಜೆ.ಕೆ.ಪೌಲ್, ತಾಲೂಕು ವಕೀಲ ಸಂಘದ ಅಧ್ಯಕ್ಷ ವಸಂತ ಮರಕ್ಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಮಾತನಾಡಿದರು.ಹಿರಿಯ ವಕೀಲ ಸಂಘ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯ ವಕೀಲರು ಹಾಜರಿದ್ದರು.