ಬೆಳ್ತಂಗಡಿ : ಕೃಷಿ ಇಲಾಖೆಯ ಆತ್ಮಯೋಜನೆಯಡಿಯಲ್ಲಿ ಕೆವಿಕೆ ವಿಜ್ಞಾನಿಗಳೊಂದಿಗೆ ಎಲೆಚುಕ್ಕೆರೋಗ ಮತ್ತು ಹಿಂಗಾರು ಒಣಗುವ ರೋಗ ಕಂಡು ಬಂದಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಲಾಯಿತು.
ಭೇಟಿ ನೀಡಿದ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಸಸ್ಯಸಂರಕ್ಷಣೆ ವಿಜ್ಞಾನಿಗಳಾದ ಡಾ.ಕೇದಾರನಾಥರವರು ಭಾಗವಹಿಸಿ ಅಡಿಕೆ ಬೆಳೆಯಲ್ಲಿ ಕಂಡು ಬರುವ ಹಿಂಗಾರ ಒಣಗುವ ರೋಗದ ಲಕ್ಷಣಗಳು (ಹಿಂಗಾರ ತುದಿಭಾಗದಿಂದ ಒಣಗುವುದು ಅಥವಾ ಕಪ್ಪಾಗುವುದು ಹಾಗೂ ಎಳೆಕಾಯಿ ಉದುರುವುದು) ಮತ್ತುಅದರ ನಿರ್ವಹಣೆಯನ್ನು, ತೋಟದಲ್ಲಿರುವ ರೋಗಬಾಧಿತ ಹಿಂಗಾರಗಳನ್ನು ತೆಗೆದು ಮಣ್ಣಿನಲ್ಲಿ ಹೂತು ಹಾಕುವುದು.
ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳನ್ನು ಬಳಸುವುದು, ಜೈವಿಕ ಸೂಕ್ಷ್ಮಾಣು ಟ್ರೈಕೊಡರ್ಮವನ್ನು ಪ್ರತಿ ಲೀಟರ್ ನೀರಿನಲ್ಲಿ 10 ಗ್ರಾಂ ನಂತೆ ಬೆರಸಿ ಸಿಂಪರಣೆ ಮಾಡುವುದು ಅಥವಾ ಪ್ರೋಪಿಕೊನಾಜೋಲ್ 25% ಇಸಿಯನ್ನೂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಎಲೆ ಮತ್ತು ಹಿಂಗಾರಕ್ಕೆ ಸಿಂಪರಣೆ ಮಾಡುವುದು. ಹಾಗೂ 30 ದಿನಗಳ ನಂತರ ಎರಡನೇ ಸಿಂಪರಣೆಯಾಗಿ ಕಾರ್ಬೆಂಡಜಿಯಮ್ 12%+ಮ್ಯಾಂಕೋಜೆಬ್ 63% ನ್ನು ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ ಬೆರಸಿ ಹಿಂಗಾರ ಮತ್ತು ಎಲೆಗಳಿಗೆ ಸಿಂಪರಣೆ ಮಾಡುವುದರಿಂದ ಹಿಂಗಾರ ಒಣಗುವ ರೋಗ ಮತ್ತು ಎಲೆಚುಕ್ಕೆ ರೋಗಗಳನ್ನು ನಿರ್ವಹಣೆ ಮಾಡಬಹುದು ಎಂದು ಹೇಳಿದರು.
ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕರಾದ ರಶ್ಮಿ ಹಾಗೂ ಕೃಷಿ ಇಲಾಖೆ, ಬೆಳ್ತಂಗಡಿ ಇಲ್ಲಿಯ ವೇಣೂರು ಹೋಬಳಿಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಅಭಿಲಾಶ್ ಉಪಸ್ಥಿತರಿದ್ದರು.