ಉಜಿರೆ: ಭಾರತದ ಸಂವಿಧಾನವು ಈ ನೆಲದ ಮೂಲಭೂತ ಕಾನೂನು. ಕಾನೂನುಗಳು ಸಂವಿಧಾನ ನಮಗೆ ಒದಗಿಸಿದ ಹಕ್ಕುಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುತ್ತವೆ. ಸಂವಿಧಾನವನ್ನು ತಿಳಿದು ಅದರಂತೆ ನಡೆಯುವುದು ಎಲ್ಲಾ ನಾಗರಿಕರ ಆದ್ಯ ಕರ್ತವ್ಯ ಎಂದು ಬೆಳ್ತಂಗಡಿ ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್. ಕೆ ಅವರು ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯಪಟ್ಟರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ನ.29ರಂದು ಆಯೋಜಿಸಿದ ಕಾನೂನು ಅರಿವು ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾನೂನುಗಳಿರುವುದು ನಮ್ಮ ರಕ್ಷಣೆಗಾಗಿ. ಆದುದರಿಂದ ಅವುಗಳ ಮೇಲೆ ನಂಬಿಕೆ ಹಾಗೂ ಗೌರವ ಅತಿ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು.
ಭಾರತದ ಸಂವಿಧಾನದ ಕುರಿತ ಭಿತ್ತಿ ಪತ್ರಿಕೆಯನ್ನು ಉದ್ಘಾಟಿಸಿದ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್ ಮಾತನಾಡಿ, ಸಂವಿಧಾನಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ.ಸಂವಿಧಾನವನ್ನು ತಿಳಿದವರಿಗೆ ಪ್ರಶ್ನಿಸುವ ಅಧಿಕಾರವಿದೆ ಎಂಬುದರ ಅರಿವಾಗುತ್ತದೆ.ಜನನದಿಂದ ಮರಣದವರೆಗೂ ಕಾನೂನು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳ್ತಂಗಡಿಯ ಹಿರಿಯ ವಕೀಲರಾದ ಶೈಲೇಶ್ ಆರ್. ಟೋಸರ್ ಅವರು ಮಾತನಾಡಿ, ಇತಿಹಾಸದ ಪುಟಗಳಿಂದ ಆಯ್ದ ಸರಿ ತಪ್ಪುಗಳ ಅವಲೋಕನದಿಂದ ನಮ್ಮ ಸಂವಿಧಾನ ಉದಯಿಸಿದೆ . ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಳಿಕವೂ ಭಾರತ ಸದೃಢವಾಗಿ ನಿಂತಿದೆ ಎಂದರೆ ಅದಕ್ಕೆ ಪ್ರಜ್ಞಾಪೂರ್ವಕವಾಗಿ ಸಂವಿಧಾನ ರಚನಾಕಾರರು ರಚಿಸಿದ ಸಂವಿಧಾನವೇ ಕಾರಣ ಎಂದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಮೂಲಭೂತ ಹಕ್ಕುಗಳ ಮಹತ್ವವನ್ನು ವಿವರಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ, ಕಾನೂನು ಸೇವಾ ಸಮಿತಿಯ ಪ್ರತಿನಿಧಿ ರಾಘವೇಂದ್ರ ಶೇಟ್, ಪ್ರಾಧ್ಯಾಪಕರಾದ ಮನೋಹರ ಶೆಟ್ಟಿ, ಡಾ.ಸಾಜಿದ ಹಾಗೂ ಶ್ಯಾಮಿಲಾ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ದಿವ್ಯ ಕುಮಾರಿ ಸ್ವಾಗತಿಸಿ ವಿದ್ಯಾರ್ಥಿನಿ ಸಾಕ್ಷಿ ವಂದಿಸಿದರು.ವಿದ್ಯಾರ್ಥಿನಿಯರಾದ ಸುಶೀರ ಹಾಗೂ ದರ್ಶಿನಿ ಕಾರ್ಯಕ್ರಮ ನಿರ್ವಹಿಸಿದರು.