Site icon Suddi Belthangady

ಡಿ.3ರಂದು ಉಜಿರೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆಯಿಂದ ಜಿ.ಪಂ.ವ್ಯಾಪ್ತಿಯ ಜನಾಂದೋಲನ ಸಭೆ- ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ರಕ್ತದಲ್ಲಿ ಸಹಿ ಹಾಕಿ ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ-ಅನಿಲ್ ಅಂತರ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿಯಾಗಿದ್ದು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ರಕ್ತದಲ್ಲಿ ಸಹಿ ಹಾಕಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ಉಜಿರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಜನಾಂದೋಲನ ಸಭೆ ಡಿಸೆಂಬರ್ ೩ರಂದು ಮಧ್ಯಾಹ್ನ 2:30ಕ್ಕೆ ಉಜಿರೆ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲಾ ಬಳಿ ನಡೆಯಲಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಅನಿಲ್ ಅಂತರ ಹೇಳಿದರು.

ನ.28ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಸೌಜನ್ಯ ಪ್ರಕರಣದ ಕುರಿತು ರಾಜ್ಯದ ನಾನಾ ಕಡೆಗಳಲ್ಲಿ ಹೋರಾಟ ನಡೆಯಿತು. ಬೆಳ್ತಂಗಡಿಯ ಪೊಲೀಸ್ ಠಾಣೆ ಮತ್ತು ಸಿಓಡಿ ಕೂಡ ತನಿಖೆ ನಡೆಸುವ ಸಂದರ್ಭ ಸಂತೋಷ್ ರಾವ್ ಆರೋಪಿ ಎಂದು ತಿಳಿಸಿತು.ಬಳಿಕ ರಾಜ್ಯವ್ಯಾಪಿ ಹೋರಾಟ ನಡೆಯಿತು.ಅಂದಿನ ಸರಕಾರ ಸಿಬಿಐಗೆ ಈ ಪ್ರಕರಣವನ್ನು ವಹಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಜೂನ್ 16ರಂದು ಸಂತೋಷ್ ರಾವ್ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು ತೀರ್ಪು ನೀಡಿದೆ.ಬಳಿಕ ನಿರಂತರ ಹೋರಾಟಗಳು ನಡೆಯುತ್ತಾ ಬಂದಿದೆ ಎಂದು ಹೇಳಿದ ಅನಿಲ್ ಅಂತರ ಅವರು ಜನಾಂದೋಲನ ಸಭೆಯಲ್ಲಿ ಈ ಪ್ರಕರಣದ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ರಕ್ತದ ಸಹಿ ಹಾಕಿ ಪತ್ರ ಬರೆಯುವ ಮೂಲಕ ರಕ್ತದ ಹಸ್ತಕ್ಷರಾದ ಚಳುವಳಿಗೆ ಚಾಲನೆ ನೀಡಲಾಗುವುದು.

ಸಭೆಗೆ ಸುಮಾರು 15 ಸಾವಿರ ಜನರು ಸೇರುವ ನೀರಿಕ್ಷೆಯಿದೆ ಎಂದು ಹೇಳಿದರು.ಜನಾಂದೋಲನ ಸಭೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ತುಳುನಾಡ ದೈವರಾಧನೆ ವಿಮರ್ಶಕ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನರವಿ, ಕು.ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ಹೈಕೋರ್ಟ್ ವಕೀಲ ಮೋಹಿತ್ ಕುಮಾರ್, ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್.ಪರಶುರಾಮು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು, ತಾಲೂಕು ಸಂಚಾಲಕ ಮನೋಜ್ ಕುಂಜರ್ಪ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.

Exit mobile version