Site icon Suddi Belthangady

‘ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿಲ್ಲ’ ಸಂಘದ ಮೂರು ನಿರ್ದೇಶಕರ ದೂರಿಗೆ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ಪಷ್ಟನೆ

ಬೆಳ್ತಂಗಡಿ: ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಅವರು ಅವ್ಯವಹಾರ, ಮೋಸ, ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಅದೇ ಸಂಘದ ನಿರ್ದೇಶಕರುಗಳಾದ ಪುಷ್ಪರಾಜ್ ಜೈನ್, ಉದಯ ಕುಮಾರ್ ಜೈನ್ ಮತ್ತು ಲಕ್ಷ್ಮೀ ಎಂಬವರು ಸಂಬಂಧಿಸಿದವರಿಗೆ ದೂರು ನೀಡಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಷ್ಟನೆ ನೀಡಿರುವ ಪ್ರಮೋದ್ ಕುಮಾರ್ ಅವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಮೋಸ, ವಂಚನೆ ನಡೆದಿಲ್ಲ.ಆ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿರುತ್ತದೆ.ಇದಕ್ಕೆ ಉಳಿದ ಎಲ್ಲಾ ನಿದೇಶಕರುಗಳು ಮತ್ತು ಅಭಿವೃದ್ಧಿ ಅಧಿಕಾರಿಗಳೇ ಸಾಕ್ಷಿ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಾವೆಲ್ಲರೂ ಒಮ್ಮತದಿಂದ ಇದ್ದೇವೆ.ನ್ಯಾಯಾಲಯದ ಆದೇಶದಂತೆ ಕಾರ್ಯದರ್ಶಿ ನೇಮಕ ಮಾಡಲಾಗಿದೆ. ಸಿಬ್ಬಂದಿಗಳಿಗೆ ಕಿರುಕುಳ ನೀಡಿರುತ್ತಾರೆಂಬುದು ಶುದ್ಧ ಸುಳ್ಳು, ಕಾರ್ಯದರ್ಶಿಯವರ ಪರ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದಾರೆಂಬುದೂ ಸುಳ್ಳು. ಸಂಘದ ಯಾವುದೇ ಪುಸ್ತಕಗಳನ್ನು ಮನೆಯಲ್ಲಿಟ್ಟಿರುವುದಿಲ್ಲ ಹಾಗೂ ನಿರ್ಣಯ ಪುಸ್ತಕ ತಿದ್ದುಪಡಿ ಮಾಡಿರುವುದಿಲ್ಲ. ಮೇಲ್ವಿಚಾರಕರು ಪ್ರತೀ ತಿಂಗಳು ಸಂಘದ ವ್ಯವಹಾರ ನೋಡಿಕೊಳ್ಳುತ್ತಿದ್ದರು ಮತ್ತು ಎಲ್ಲಾ ಪುಸ್ತಕಗಳ ತಪಾಸಣೆ/ತನಿಖೆ ನಡೆಸುತ್ತಿದ್ದರು.ಆದ ಕಾರಣ ಆ ವಿಚಾರವೂ ಸಂಪೂರ್ಣ ಸುಳ್ಳು. ಈ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದಾಗಿ ಇಲಾಖಾ ತನಿಖೆಯಿಂದ ತಿಳಿದು ಬಂದಿದೆ.ಪ್ರಸಕ್ತ ವರ್ಷ ಸಂಘಕ್ಕೆ 9 ಲಕ್ಷ ಲಾಭ ಬಂದಿದ್ದು ಸಂಘ ಎ ಗ್ರೇಡ್‌ನಲ್ಲಿದೆ.ಸಂಘದ ಅಭಿವೃದ್ಧಿಯನ್ನು ಸಹಿಸದ ಒಂದಿಬ್ಬರು ವಿಕೃತ ಮನಸ್ಸಿನವರು ಆಪಾದನೆ ಮಾಡಿ ಸಂಘದ ಹೆಸರು ಹಾಳು ಮಾಡಲು ಪ್ರಯತ್ನಿಸಿರುವುದಾಗಿದೆ. ಅವರ ಎಲ್ಲಾ ಆಪಾದನೆಗಳು ಸುಳ್ಳು ಎಂದು ಈ ಮೂಲಕ ಸ್ಪಷ್ಠೀಕರಣ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Exit mobile version