Site icon Suddi Belthangady

ತಾಲೂಕು ಸಮ್ಮೇಳನ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 17ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರಗಲಿದ್ದು, ಇದರ ಪೂರ್ವಭಾವಿ ಸಭೆಯು ವಾಣಿ ಕಾಲೇಜಿನಲ್ಲಿ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಭೆಯಲ್ಲಿ ಸಮ್ಮೇಳನ ಸಂಯೋಜನಾ ಸಮಿತಿಯ ರಚನೆ ಜರಗಿದ್ದು ಅಧ್ಯಕ್ಷರಾಗಿ ಬೆಳ್ತಂಗಡಿ ನಗರ ಪಂಚಾಯತ್ತಿನ ನಿಕಟ ಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ ಬೆಳ್ತಂಗಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಸುವರ್ಣ ಆರ್ಕೆಡೆಯ ಸಂಪತ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕೊಯ್ಯೂರು ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮೋಹನ್ ಗೌಡ, ಕಾರ್ಯದರ್ಶಿಯಾಗಿ ವಾಣಿ ಕಾಲೇಜಿನ ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್, ಕೋಶಾಧ್ಯಕ್ಷರಾಗಿ ಮೀನಾಕ್ಷಿ ಎಂ ಗುರುವಾಯನಕೆರೆ ಇವರು ಆಯ್ಕೆಯಾದರು.

ಸಮಿತಿಯ ಅಧ್ಯಕ್ಷರಾದ ಜಯಾನಂದ ಗೌಡರವರು ಮಾತನಾಡುತ್ತಾ, ವಾಣಿ ಕಾಲೇಜಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಯ ಅವಕಾಶ ಸಿಕ್ಕಿರುವುದು ಬಹಳ ಸಂತೋಷ.ಸಮ್ಮೇಳನದ ಯಶಸ್ಸಿನ ಹಿನ್ನೆಲೆಯಲ್ಲಿ ಸರ್ವರೂ ಸಹಕಾರ ಮಾರ್ಗದರ್ಶನವನ್ನು ನೀಡಿ, ಸಮ್ಮೇಳನವು ಅರ್ಥಪೂರ್ಣವಾಗಿ ಜರಗುವಂತೆ ಮಾಡೋಣವೆಂದು ಆಶಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.ಉದ್ಘಾಟನೆ, ಸಮಾರೋಪ, ಗೋಷ್ಠಿಗಳು, ವಿವಿಧ ಉಪ ಸಮಿತಿಗಳ ರಚನೆ ಹಾಗೂ ಇತರ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು .

ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.ಸಮ್ಮೇಳನದ ಪೂರ್ಣ ಚಿತ್ರಣ ಒಂದು ವಾರದೊಳಗೆ ಪ್ರಕಟಿಸುವ ಬಗ್ಗೆ ಅಭಿಪ್ರಾಯ ಪಡಲಾಯಿತು.ಸಮ್ಮೇಳನದ ಸಂಯೋಜನ ಸಮಿತಿಯ ಗೌರವಾಧ್ಯಕ್ಷರಾಗಿ ಮಾನ್ಯ ಶಾಸಕರಾದ ಹರೀಶ್ ಪೂಂಜರವರನ್ನು ವಿನಂತಿಸುವುದೆಂದು ನಿರ್ಣಯಿಸಲಾಯಿತು.

ಸಭೆಯಲ್ಲಿ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷರಾದ ಫುಷ್ಪರಾಜ್ ಶೆಟ್ಟಿ, ಬಿ.ಲಕ್ಷ್ಮಣ ಪೂಜಾರಿ ಲಾಯಿಲ, ವಸಂತಿ ಮುಂಡಾಜೆ, ಪ್ರಸನ್ನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಗೌಡ, ಗುರುದೇವ ಪಿಯು ಕಾಲೇಜಿನ ಗಣೇಶ್ ಶಿರ್ಲಾಲು, ಬೆಳ್ತಂಗಡಿ ಜೇಸೀಐ ಅಧ್ಯಕ್ಷರಾದ ಜೇಸೀ ಶಂಕರ ರಾವ್, ಅನುರಾಧ ರಾವ್ ಬೆಳ್ತಂಗಡಿ, ಮಹಾಬಲ ಗೌಡ ಗುರುವಾಯನಕೆರೆ, ಬೆಳ್ಳಿಯಪ್ಪ ಗೌಡ ಬೆಳಾಲು, ವಿಷ್ಣು ಪ್ರಕಾಶ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ವಾಣಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಲಕ್ಷ್ಮೀನಾರಾಯಣರವರು ಸ್ವಾಗತಿಸಿ, ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು.ರಾಮಕೃಷ್ಣ ಭಟ್ ಬೆಳಾಲುರವರು ಸಭೆಯನ್ನು ನಿರ್ವಹಿಸಿದರು.

Exit mobile version