Site icon Suddi Belthangady

ಪಲ್ಲಕ್ಕಿ ಬಸ್ ಸಂಚಾರಕ್ಕೆ ಚಾಲನೆಬೆಂಗಳೂರಿಗೆ ಪಯಣಿಸಿದ ಪ್ರತಾಪಸಿಂಹ ನಾಯಕ್ – ಪಲ್ಲಕ್ಕಿ ಬಸ್‌ನಿಂದ ಸಂಪರ್ಕ ಹತ್ತಿರ-ಹರೀಶ್ ಪೂಂಜ

ಬೆಳ್ತಂಗಡಿ: ಪಲ್ಲಕ್ಕಿ ಬಸ್‌ನ ಮೂಲಕ ಬೆಳ್ತಂಗಡಿ ಮತ್ತು ಬೆಂಗಳೂರಿನ ಸಂಪರ್ಕ ಹತ್ತಿರವಾಗುವ ವ್ಯವಸ್ಥೆಯಾಗಿದೆ. ಅತ್ಯಂತ ಒಳ್ಳೆಯ ರೀತಿಯ ಸೇವೆಯನ್ನು ಕೆಎಸ್‌ಆರ್‌ಟಿಸಿಯ ಪಲ್ಲಕ್ಕಿಯ ಮೂಲಕ ತಾಲೂಕಿನ ಜನತೆಗೆ ಸಿಕ್ಕಿರುವುದಕ್ಕೆ ಸಂತೋಷವಾಗುತ್ತದೆ. ಪ್ರತಿ ದಿನ ಈ ಬಸ್‌ಗಳ ಸೇವೆ ತಾಲೂಕಿನ ಜನತೆಗೆ ದೊರಕಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸುಗಮ ಸಂಚಾರಕ್ಕಾಗಿ ಆರಂಭಗೊಂಡ ಪಲ್ಲಕಿ ಬಸ್‌ಗಳಿಗೆ ನ.20ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದ ಶಾಸಕ ಹರೀಶ್ ಪೂಂಜ ಅವರು ಬಳಿಕ ಬಸ್ ಚಾಲನೆ ಮಾಡಿದರು. ನಂತರ ಮಾಧ್ಯಮಗಳ ಜತೆ ಹರೀಶ್ ಪೂಂಜ ಮಾತನಾಡಿದರು. ಪುತ್ತೂರುಗೆ 4 ಪಲ್ಲಕ್ಕಿ ಬಸ್‌ಗಳನ್ನು ಒದಗಿಸಲಾಗಿತ್ತು. ಎರಡು ಬಸ್‌ಗಳನ್ನು ಬೆಳ್ತಂಗಡಿಗೆ ನೀಡಲಾಗಿದೆ. ಒಂದು ಪಲ್ಲಕ್ಕಿ ಬಸ್ ಬೆಳ್ತಂಗಡಿಯಿಂದ ಬೆಂಗಳೂರಿಗೆ ಮತ್ತೊಂದು ಬೆಂಗಳೂರಿನಿಂದ ಬೆಳ್ತಂಗಡಿಗೆ ಸಂಚರಿಸಲಿದೆ. ತಾಲೂಕಿನ ಜನತೆಗೆ ಉತ್ತಮ ರೀತಿಯ ಬಸ್‌ನ ವ್ಯವಸ್ಥೆ ಬೇಕು ಎನ್ನುವಂತಹದ್ದು ಬಹಳ ವರ್ಷದ ಬೇಡಿಕೆಯಾಗಿತ್ತು. ಆ ಬೇಡಿಕೆ ಇಂದು ಈಡೇರಿದೆ. ಅಷ್ಟೇ ಅಲ್ಲದೆ ಇನ್ನೂ ಎರಡು ಕೆಎಸ್‌ಆರ್‌ಟಿಸಿಯ ಕೆಂಪು ಬಸ್ ಸೇರ್ಪಡೆಯಾಗಿದ್ದು, ಅದು ಕೂಡ ಬೆಳ್ತಂಗಡಿಯಿಂದ ಬೆಂಗಳೂರಿಗೆ ಮತ್ತೊಂದು ಬೆಂಗಳೂರಿನಿಂದ ಬೆಳ್ತಂಗಡಿಗೆ ಸಂಚರಿಸಲಿದೆ. ಬಸ್ ಸೌಲಭ್ಯ ಒದಗಿಸಿದ ಸಾರಿಗೆ ಸಚಿವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹರೀಶ್ ಪೂಂಜ ಹೇಳಿದರು.
ಪಯಣವನ್ನು ಸುಂದರವಾಗಿಸುವ ವ್ಯವಸ್ಥೆ-ಪ್ರತಾಪ್‌ಸಿಂಹ ನಾಯಕ್: ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ ಬದುಕು ಒಂದು ಪಯಣ. ಅದನ್ನು ಸುಂದರವಾಗಿಸಲು ಕೆಎಸ್‌ಆರ್‌ಟಿಸಿ ಉತ್ತಮವಾದ ವ್ಯವಸ್ಥೆಯನ್ನು ಮಾಡುತ್ತಿದೆ. ಬೆಳ್ತಂಗಡಿ ಮತ್ತು ಬೆಂಗಳೂರಿಗೆ ಹತ್ತಿರ ಮಾಡುವ ಕೆಲಸ ಆಗಿದೆ. ಜನತೆಯ ಬೇಡಿಕೆಯಾಗಿದ್ದು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಪಲ್ಲಕ್ಕಿ ಬಸ್ ಇದೆ. ಬಸ್ ವ್ಯವಸ್ಥೆ ಒದಗಿಸಿದ ಶಾಸಕರಿಗೆ, ಸಚಿವರಿಗೆ, ಸರಕಾರಕ್ಕೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪಟ್ಟಣ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್ ಸೇರಿದಂತೆ ಬಿಜೆಪಿ ಪ್ರಮುಖರು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂತೋಷವು ಪ್ರಯಾಣಿಸುತ್ತದೆ: ಎಂಬ ಟ್ಯಾಗ್‌ಲೈನ್‌ನೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡಿರುವ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ 4 ಬಸ್‌ಗಳು ಪುತ್ತೂರು ವಿಭಾಗಕ್ಕೂ ಶೀಘ್ರದಲ್ಲಿ ಸೇರಿಕೊಳ್ಳಲಿದೆ. ರಾಜಹಂಸ, ಐರಾವತ, ಅಂಬಾರಿ ಎಂಬ ಸಾಂಸ್ಕೃತಿಕ ಹೆಸರುಗಳಂತೆ ಹೊಸ ಬಸ್ ಪಲ್ಲಕ್ಕಿ ಎಂಬ ಹೆಸರನ್ನು ಹೊಂದಿದೆ. ಇದು ರಾಜಹಂಸ ಹಾಗೂ ಇತರ ನಾನ್ ಎಸಿ ಸ್ಲೀಪರ್ ಬಸ್‌ಗಳಿಗಿಂತ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಈ ನೂತನ ಬಸ್‌ಗಳಿಗೆ ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ್ದರು. ಐಷಾರಾಮಿ ಬಸ್ ಇದಾಗಿದ್ದು ಪ್ರಥಮ ಹಂತದಲ್ಲಿ ಬಿಡುಗಡೆಗೊಂಡಿರುವ ಒಟ್ಟು 40 ಬಸ್‌ಗಳಲ್ಲಿ ೪ ಬಸ್‌ಗಳು ಪುತ್ತೂರು ವಿಭಾಗಕ್ಕೆ ಆಗಮಿಸಲಿದೆ. ಈ ನಾನ್ ಎಸಿ ಸ್ಲೀಪರ್ ಬಸ್ ಪುತ್ತೂರು-ಬೆಂಗಳೂರು ಮಧ್ಯೆ ಸಂಚರಿಸಲಿವೆ.ಈ ಬಸ್ಸು ಆಕರ್ಷಕ ವಿನ್ಯಾಸ ಹಾಗೂ ಬಣ್ಣಗಳಿಂದ ಪ್ರಯಾಣಿಕರನ್ನು ತನ್ನತ್ತ ಸೆಳೆಯುವಂತಿದೆ.

ಏನೆಲ್ಲಾ ವೈಶಿಷ್ಠ್ಯತೆಗಳಿವೆ: ಪಲ್ಲಕ್ಕಿ ಬಸ್ಸುಗಳು 30 ಸ್ಲೀಪಿಂಗ್ ಬರ್ತ್‌ಗಳನ್ನು ಹೊಂದಿದ್ದು, ಪ್ರಯಾಣದ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯ, ಪ್ರತಿ ಬರ್ತ್‌ನಲ್ಲಿ ಮೀಸಲಾದ ಮೊಬೈಲ್ ಹೋಲ್ಡರ್ ಮತ್ತು ಪ್ರತಿ ಪ್ರಯಾಣಿಕರಿಗೆ ಚಪ್ಪಲಿ, ಶೂ ಇಡಲು ಸ್ಥಳಾವಕಾಶ ಇದೆ. ಬಸ್ಸುಗಳನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಬಸ್ಸಿನಲ್ಲಿ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬಸ್ಸಿನೊಳಗೆ ಯಾವುದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರಿಗೂ ಎಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದೆ. ಬಸ್‌ನಲ್ಲಿ ಆಡಿಯೋ ಸ್ಪೀಕರ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ. ಪ್ರಯಾಣಿಕರು ಬಸ್‌ನಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಬಸ್ ಸಿಬ್ಬಂದಿಗೆ ಬಸ್‌ನಲ್ಲಿ ಒದಗಿಸಲಾದ ಆಡಿಯೊ ಸ್ಪೀಕರ್‌ಗಳ ಮೂಲಕ ತಿಳಿಸಬಹುದು.
ಬಸ್ಸುಗಳನ್ನು ರಾತ್ರಿಯ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ಇವು 11.3 ಮೀಟರ್ ಉದ್ದದ ನಾನ್ ಎಸಿ ಬಸ್. ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್ ಅಳವಡಿಸಲಾಗಿದೆ.
ಸೀಟ್ ನಂಬರ್ ಮೇಲೆ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ. ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಡಿಸಲಾಗಿದೆ. ಡಿಜಿಟಲ್ ಗಡಿಯಾರ ಹಾಗೂ ಎಲ್.ಇ.ಡಿ. ಪ್ಲೋರ್ ವ್ಯವಸ್ಥೆಯಿದೆ. ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ ಹೊಂದಿದೆ. ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಇದೇ ಮೊದಲ ಬಾರಿಗೆ ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮರಾ ಅಳವಡಿಸಲಾಗಿದೆ.

235 ಗುತ್ತಿಗೆ ಆಧಾರದ ಚಾಲಕರ ನೇಮಕ: ನಿಗಮಕ್ಕೆ ಗುತ್ತಿಗೆ ಆಧಾರದಲ್ಲಿ ಚಾಲಕರು ನೇಮಕಗೊಂಡಿದ್ದು ಇದರಲ್ಲಿ 235 ಮಂದಿ ಚಾಲಕರು ಪುತ್ತೂರು ವಿಭಾಗಕ್ಕೆ ಆಗಮಿಸಿದ್ದಾರೆ. ಎರಡು ಹಂತದಲ್ಲಿ ಚಾಲಕರನ್ನು ನಿಯೋಜಿಸಲಾಗಿದೆ. ಪ್ರಥಮ ಹಂತದಲ್ಲಿ 125 ಹಾಗೂ ಎರಡನೇ ಹಂತದಲ್ಲಿ 110 ಮಂದಿ ಚಾಲಕರನ್ನು ನಿಯೋಜಿಸಲಾಗಿದೆ. ಇದರಲ್ಲಿ ಪುತ್ತೂರು-50, ಬಿ.ಸಿ.ರೋಡ್-40, ಧರ್ಮಸ್ಥಳ-75, ಮಡಿಕೇರಿ-35 ಹಾಗೂ ಸುಳ್ಯ ಘಟಕಕ್ಕೆ 35 ಚಾಲಕರನ್ನು ನಿಯೋಜಿಸಲಾಗುವುದು. ನೇಮಕಗೊಂಡಿರುವ ಚಾಲಕರ ಸಂಖ್ಯೆಗಿಂತ ವರ್ಗಾವಣೆಗೊಂಡಿರುವ ಚಾಲಕರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ವಿಭಾಗದ ವ್ಯಾಪ್ತಿಯಲ್ಲಿ ಚಾಲಕರ ಬೇಡಿಕೆ ಇನ್ನೂ ಇದೆ ಎಂಬ ಮಾಹಿತಿ ಲಭಿಸಿದೆ.

ಹೂ ನೀಡಿ ಶುಭ ಹಾರೈಸಿದ ಶಾಸಕರು: ಪಲ್ಲಕ್ಕಿ ಬಸ್ ಸಂಚಾರಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಪಲ್ಲಕ್ಕಿ ಬಸ್‌ನಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪ್ರಯಾಣಿಸಿದರು. ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದು ಸಂತೋಷವಾಗುತ್ತಿದೆ. ಪಲ್ಲಕ್ಕಿ ಬಸ್‌ನ ಮೊದಲ ಪಯಣದಲ್ಲಿ ಮೊದಲ ಪ್ರಯಾಣಿಕನಾಗಿ ಸರಕಾರದ ಪ್ರತಿನಿಧಿಯಾಗಿ ತೆರಳುತ್ತಿದ್ದೇನೆ. ನಾನು ಈ ವಿಚಾರವನ್ನು ಇತಿಹಾಸದ ಪುಟದಲ್ಲಿ ನೆನಪು ಇಟ್ಟುಕೊಳ್ಳಬಹುದು ಎಂದು ಪ್ರತಾಪ್‌ಸಿಂಹ ನಾಯಕ್ ಹೇಳಿದರು. ಶಾಸಕ ಹರೀಶ್ ಪೂಂಜ ಅವರು ಪ್ರತಾಪಸಿಂಹ ನಾಯಕ್ ಅವರಿಗೆ ಗುಲಾಬಿ ಹೂ ನೀಡುವುದರ ಮೂಲಕ ಪ್ರಯಾಣಕ್ಕೆ ಶುಭಹಾರೈಸಿದರು.

Exit mobile version