Site icon Suddi Belthangady

ಶಾಸಕ ಹರೀಶ್ ಪೂಂಜರಿಂದ ಸಿ.ಎಂ. ವಿರುದ್ಧ ಆಕ್ಷೇಪಾರ್ಹ, ಕೋಮು ಭಾವನೆ ಕೆರಳಿಸುವ ಭಾಷಣ- ಭಾಷಣದ ವೀಡಿಯೋ ಸಿ.ಡಿ. ಒದಗಿಸಲು ದೂರುದಾರರಾದ ನಮಿತಾ ಪೂಜಾರಿಗೆ ಹೈಕೋರ್ಟ್ ಸೂಚನೆ

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಆಕ್ಷೇಪಾರ್ಹ ಮತ್ತು ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾದ ಕ್ರಿಮಿನಲ್ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಉಲ್ಲೇಖಿಸಿರುವ ಹೇಳಿಕೆಯ ವಿಡಿಯೋದ ಸಿ.ಡಿ.ಯನ್ನು ಒದಗಿಸಲು ಪ್ರಕರಣದ ದೂರುದಾರರಾದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನಮಿತಾ ಕೆ.ಪೂಜಾರಿಯವರಿಗೆ ಹೈಕೋರ್ಟ್ ಸೂಚಿಸಿದೆ.
ಬೆಳ್ತಂಗಡಿ ಠಾಣಾ ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಇದೇ ವೇಳೆ ದೂರುದಾರರಾದ ನಮಿತಾ ಪೂಜಾರಿ ಪರ ವಕೀಲ ಬಿ.ಲತೀಫ್ ಅವರು ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ ೮ಕ್ಕೆ ಮುಂದೂಡಿದೆ.
ಇದು ಪ್ರಕರಣ: ಎರಡನೇ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿರುವ ಹರೀಶ್ ಪೂಂಜ ಅವರಿಗೆ ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ವತಿಯಿಂದ 2023ಮೇ.22ರಂದು ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಭಾಷಣ ಮಾಡಿದ್ದ ಹರೀಶ್ ಪೂಂಜ ಅವರು, ಕೋಮು ಪ್ರಚೋದಕ ಮತ್ತು ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟು ಮಾಡಬೇಕು ಹಾಗೂ ಶಾಂತಿ ಕದಡಬೇಕು ಎಂಬ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಮಿತಾ ಕೆ.ಪೂಜಾರಿ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪೊಲೀಸರು, ಭಾರತೀಯ ದಂಡ ಸಂಹಿತೆ 1860ರ(ಐಪಿಸಿ)ಕಲಂ 153,153(ಎ),505ಮತ್ತು 505(ಎ)ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಹರೀಶ್ ಪೂಂಜ ಅವರು ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಹರೀಶ್ ಪೂಂಜ ಅವರ ಭಾಷಣದ ವೀಡಿಯೋ ಸಿ.ಡಿ.ಯನ್ನು ಹಾಜರುಪಡಿಸಲು ಪ್ರಕರಣದ ದೂರುದಾರೆಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

Exit mobile version