Site icon
Suddi Belthangady

ಕಡಿರುದ್ಯಾವರ: ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ಕೋಪದಲ್ಲಿ ಮನೆಗೆ ನುಗ್ಗಿ ಕೊಲೆ ಬೆದರಿಕೆ-ದೂರು ದಾಖಲು

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕೌಡಂಗೆ ಮನೆ ನಿವಾಸಿಗಳಾದ ನಳಿನಿ ಮತ್ತು ಅವರ ಮನೆಯವರಿಗೆ ಕೊಲೆ ಬೆದರಿಕೆ ಹಾಕಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ.14ರಂದು ರಾತ್ರಿ 7.30ರ ವೇಳೆಗೆ ತಮ್ಮ ಮನೆಯಲ್ಲಿ ನಳಿನಿ, ಅವರ ಗಂಡ ಮಹೇಶ್ ಮತ್ತು ಮಗು ಇರುವಾಗ ಸಂಜೆ ರಾಧಾಕೃಷ್ಣ, ರಂಜಿತ್, ಆನಂದ ಗೌಡ, ಸುದರ್ಶನ್, ಸುಧಾಕರ ಮತ್ತು ಇತರ 5 ಮಂದಿ 3 ವಾಹನಗಳಲ್ಲಿ ಬಂದು ಮನೆಗೆ ಅಕ್ರಮ ಪ್ರವೇಶಿಸಿ ಬೆದರಿಕೆ ಒಡ್ಡಿದ್ದಾರೆ.

ಮರಳು ತೆಗೆಯುವುದರ ವಿರುದ್ಧ ನೀವು ದೂರು ನೀಡಿದ್ದೀರಿ, ನಿಮ್ಮನ್ನು ಹೀಗೆ ಬಿಡುವುದಿಲ್ಲ, ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಒಂದು ಮಾರುತಿ ೮೦೦ ಕಾರು, ಒಂದು ಬುಲೆಟ್ ಮತ್ತು ಒಂದು ಹೀರೋ ಹೋಂಡಾ ಫ್ಲೆಶರ್ ವಾಹನಗಳಲ್ಲಿ ಬಂದು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ದೊಣ್ಣೆ ಹಾಗೂ ರಾಡ್ ಹಿಡಿದು ಬೆದರಿಕೆ ಒಡ್ಡಿದ್ದಾರೆ. ನಳಿನಿ ಅವರ ಮೈಮೇಲೆ ಕೈ ಮಾಡಿ ಬಳೆಗಳನ್ನು ಒಡೆದಿದ್ದಾರೆ. ಅಷ್ಟರಲ್ಲಿ ನೆರೆಮನೆಯವರು ಧಾವಿಸಿ ಬಂದಿದ್ದು ಅವರು ಬಂದ ಕೂಡಲೇ ೧೧೨ಕ್ಕೆ ಕರೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ನಳಿನಿ ಅವರು ನೀಡಿದ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ನ್ಯಾಯವಾದಿ ಪ್ರಶಾಂತ್ ವಾದಿಸಿದ್ದರು.

Exit mobile version