Site icon Suddi Belthangady

ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ವಿದ್ಯಾರ್ಥಿ ಸರಕಾರದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ವಿದ್ಯಾಸಂಸ್ಥೆಗಳ ಮಾತೃಸಂಸ್ಥೆಯೆಂದೆನಿಸಿಕೊಂಡಿರುವ, ಭಾರತೀಯ ತತ್ತ್ವಗಳನ್ನೊಳಗೊಂಡ ಗುರುಕುಲ ಪದ್ಧತಿಯ ವಿದ್ಯಾರ್ಥಿನಿಲಯ ಶ್ರೀ ಸಿದ್ಧವನ ಗುರುಕುಲದ 2023-24 ನೇ ಸಾಲಿನ ವಿದ್ಯಾರ್ಥಿ ಸರಕಾರದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವು ಗುರುಕುಲದ ಅಮೃತಸಿದ್ಧಿ ಸಭಾಭವನದಲ್ಲಿ ನ. 21 ರಂದು ಜರಗಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸಿದ್ಧವನ ಗುರುಕುಲ ವಿದ್ಯಾರ್ಥಿ ಸರಕಾರದ ರಾಜ್ಯಪಾಲರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ, ವಿದ್ಯಾರ್ಥಿಗಳ ‘ಸೌರಭ’ ಭಿತ್ತಿಪತ್ರಿಕೆಯ ನೂತನ ಸಂಚಿಕೆ ಅನಾವರಣಗೊಳಿಸಿದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲಾ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದ ಹೆಗ್ಗಡೆ ಅವರು, “ಸರಕಾರದಲ್ಲಿ ಆಡಳಿತ ಪಕ್ಷದ ಜತೆಗೆ ವಿರೋಧ ಪಕ್ಷವೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಆಡಳಿತ ಪಕ್ಷಕ್ಕೆ ಸಹಕಾರಿಯಾಗುವಂತೆ, ಅವರ ಕಾರ್ಯದಲ್ಲಿ ದೋಷಗಳನ್ನು ಹುಡುಕುವ ಬದಲು ತಿದ್ದುವ ಕೆಲಸವನ್ನು ವಿರೋಧ ಪಕ್ಷ ಮಾಡಬೇಕು” ಎಂದು ಕಿವಿಮಾತು ಹೇಳಿದರು.

ಸೋಲಿನ ಹಿಂದೆ ಯಾರೂ ಇರುವುದಿಲ್ಲ. ಎಲ್ಲರೂ ಯಶಸ್ಸಿನ ಹಿಂಬಾಲಕರೇ. ಸೋಲಿಗೆ ಅಂಜದೆ, ಗೆಲುವಿಗೆ ಬೀಗದೆ ಸದಾ ಚಲನಶೀಲರಾಗಿರಬೇಕು. ಶಿಸ್ತು, ಸಂಯಮ, ಕಾರ್ಯಕ್ಷಮತೆ, ತಾಳ್ಮೆ, ಎಲ್ಲಾ ರೀತಿಯ ಪರಿಸ್ಥಿತಿಗಳಿಗೂ ಹೊಂದಿಕೊಂಡು ಹೋಗುವ ಗುಣವನ್ನು ಸಿದ್ಧವನ ಗುರುಕುಲ ಕಲಿಸುತ್ತದೆ. ಆಡಳಿತ ಪಕ್ಷವು ತನ್ನ ಯೋಜನೆಗಳನ್ನು ಕಾರ್ಯಗತವಾಗಿಸುವಲ್ಲಿ ಯಶಸ್ವಿಯಾಗಲಿ. ಈ ನಿಟ್ಟಿನಲ್ಲಿ ಸಂಸ್ಥೆ ಎಲ್ಲಾ ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿ, ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶ್ರೀ ಸಿದ್ಧವನ ಗುರುಕುಲದ ಹಳೆ ವಿದ್ಯಾರ್ಥಿ ಯುವರಾಜ್ ಜೈನ್ ಮಾತನಾಡಿ, “ನಾವು ನಮ್ಮ ಸ್ವಾರ್ಥಕ್ಕೆ ಬದುಕದೆ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಿದರೆ ಎಲ್ಲರ ಮನದಂಗಳದಲ್ಲಿ ಉಳಿಯುತ್ತೇವೆ. ಪ್ರೀತಿ ಮತ್ತು ಗೌರವ ನಮ್ಮನ್ನು ಜೀವನದಲ್ಲಿ ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ” ಎಂದರು.

“ನನ್ನಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಸಿದ್ಧವನ ಗುರುಕುಲ ಆಶ್ರಯ ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡಿದೆ. ಇಂದು ನಾನು ಸ್ಥಾಪಿಸಿರುವ ಎಕ್ಸಲೆಂಟ್ ಸಂಸ್ಥೆ ಕೂಡ ಸಿದ್ಧವನದ ಕೂಸು. ಇಲ್ಲಿನ ಸಂಸ್ಕಾರಯುತ ಜೀವನ ಬೇರೆಲ್ಲೂ ದೊರೆಯದು. ಇಲ್ಲಿ ಗೆದ್ದವರಿಗೂ ಸೋತವರಿಗೂ ಸಮಾನ ಸ್ಥಾನ ದೊರಕುತ್ತದೆ. ಇಲ್ಲಿರುವ ಆಸಕ್ತರು ಮುಂದೆ ರಾಜಕೀಯದಲ್ಲಿ ಭಾಗವಹಿಸಲು ಪ್ರಯತ್ನಿಸಿ. ಈಗಿನ ರಾಜಕೀಯ ವ್ಯವಸ್ಥೆಗೆ ಪ್ರತಿಭಾನ್ವಿತರ ಆವಶ್ಯಕತೆ ಇದೆ. ಇಲ್ಲಿ ಕಲಿತಿರುವ ಮೌಲ್ಯಗಳನ್ನು ಮುಂದೆ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ” ಎಂದು ಅವರು ಸಲಹೆ ನೀಡಿದರು.

ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ., ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಕಾಲೇಜಿನ ಅಧಿಕಾರಿ ವರ್ಗದವರು, ಉಪನ್ಯಾಸಕರು ಹಾಗೂ ಗುರುಕುಲದ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಸಿದ್ಧವನ ಗುರುಕುಲ ವಿದ್ಯಾರ್ಥಿ ಸರಕಾರದ ಮುಖ್ಯ ಸಚೇತಕ ಡಾ.ಸತೀಶ್ಚಂದ್ರ ಎಸ್. ಪ್ರಸ್ತಾವಿಸಿ, ಸ್ವಾಗತಿಸಿದರು. ಗುರುಕುಲದ ಪ್ರಧಾನ ನಿಲಯ ಪಾಲಕ ಕೇಶವ್ ನಾಯಕ್ ವಂದಿಸಿದರು. ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮಹಾವೀರ್ ಜೈನ್ ನಿರೂಪಿಸಿದರು.

Exit mobile version