ಬೆಳ್ತಂಗಡಿ: ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಇರುವ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಅಂಗಡಿಗಳ ತ್ಯಾಜ್ಯ ನೀರಿನಿಂದ ನದಿ ನೀರು ಮಲಿನಗೊಳ್ಳುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಗೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಜಾರಿಗೊಳಿಸಿದ ನೋಟೀಸಿನ ವಿವರ: ನ.16ರಂದು ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ ಬಂದ ಸುದ್ದಿ ಮತ್ತು ಉದಯವಾಣಿ ಪತ್ರಿಕೆಯಲ್ಲಿ ಬಂದ ಸುದ್ದಿಯ ವಿಷಯಕ್ಕೆ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಇರುವ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಅಂಗಡಿಗಳ ತ್ಯಾಜ್ಯ ನೀರಿನಿಂದ ನದಿ ಮಲಿನಗೊಳ್ಳುತ್ತಿರುವ ಬಗ್ಗೆ ಹಾಗೂ ಕೊಳಚೆ ನೀರು ಕೃಷಿ ಇಲಾಖೆಯ ಮುಂಭಾಗದ ಸಾರ್ವಜನಿಕ ರಸ್ತೆ ಬದಿಯಲ್ಲಿನ ತೋಡಿನಲ್ಲಿ ಶೇಖರಣೆಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವ ಬಗ್ಗೆ ಕಚೇರಿಗೆ ವಾಟ್ಸ್‌ಅಪ್ ಮೂಲಕ ಸುದ್ದಿವಾಹಿನಿ ಪತ್ರಿಕೆಯ ಪ್ರತಿ ಮತ್ತು ವೀಡಿಯೋಗಳ ಮೂಲಕ ದೂರನ್ನು ಸಲ್ಲಿಸಿರುತ್ತಾರೆ.
ಪತ್ರಿಕಾ ವರದಿಗಳನ್ನು ಅವಲೋಕಿಸಿದಾಗ ಸದರಿ ಸ್ಥಳದಲ್ಲಿ ಮಳೆಯ ನೀರು ಸಾಗಿಸುವ ಚರಂಡಿಯು ಸಮರ್ಪಕವಾಗಿಲ್ಲದ ಕಾರಣ ಮತ್ತು ಈ ಪ್ರದೇಶದಲ್ಲಿ ಉತ್ಪತಿಯಾಗುವ ನೀರನ್ನು ಸೂಕ್ತ ರೊಚ್ಚು ನೀರು ಸಂಸ್ಕರಣಾ ಘಟಕವನ್ನು ಅಳವಡಿಸಿ ಸಂಸ್ಕರಿಸಲು ವ್ಯವಸ್ಥೆಯನ್ನು ಕಲ್ಪಿಸದ ಕಾರಣ ಉತ್ಪತಿಯಾಗುವ ರೊಚ್ಚು ನೀರು ಮಳೆ ನೀರು ಚರಂಡಿಯ ಮೂಲಕ ಕೆಳಗಿನ ಪ್ರದೇಶಕ್ಕೆ ಸೇರುತ್ತಿರುದರಿಂದ ಅಲ್ಲಿ ರೊಚ್ಚು ನೀರು ನೆಲೆನಿಂತು ಮಾಲಿನ್ಯ ಉಂಟಾಗುತ್ತಿರಬಹುದೆಂದು ಭಾವಿಸಲಾಗಿದೆ. ಆದ್ದರಿಂದ ತಮಗೆ ಈ ಮೂಲಕ ತಿಳಸುವುದೆನೆಂದರೆ ಪ್ರಸ್ತುತ ಹಾಳಾಗಿರುವ ಚರಂಡಿಯನ್ನು ಈ ಕೂಡಲೇ ದುರಸ್ತಿಗೊಳಿಸಿ ಅನಗತ್ಯ ಗುಂಡಿ/ಹಳ್ಳಗಳನ್ನು ಮುಚ್ಚಿ ಸಾರ್ವಜನಿಕರಿಗೆ ಮತ್ತು ಸಾಕು ಪ್ರಾಣಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಕೋರಿದೆ. ಮುಂದುವರಿದಂತೆ ಜಲ ಕಾಯ್ದೆ ನಿಯಮ ೨೫/೨೬ರ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ರೊಚ್ಚು ನೀರನ್ನು, ಸೂಕ್ತ ರೊಚ್ಚು ನೀರಿನ ಸಂಸ್ಕರಣಾ ಘಟಕವನ್ನು ಅಳವಡಿಸಿ ಶುದ್ಧಿಕರಿಸುವುದು ಕಡ್ಡಾಯವಾಗಿರುವುದರಿಂದ ಈ ಬಗ್ಗೆ ಅತ್ಯಂತ ತುರ್ತಾಗಿ ಕ್ರಮ ವಹಿಸಲು ಕೋರಿದೆ.
ಅಲ್ಲದೆ ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಇರುವ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಅಂಗಡಿಗಳ ವಾಣಿಜ್ಯ ಸಂಕೀರ್ಣಗಳಿಂದ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುವನ್ನು ಸೂಕ್ತವಾಗಿ ಘನ ತ್ಯಾಜ್ಯ ನಿರ್ವಹಣೆ ಅಧಿನಿಯಮಗಳಲ್ಲಿ ತಿಳಿಸಿರುವಂತೆ ವಿಂಗಡಿಸಿ ಸ್ಥಳೀಯ ಸಂಸ್ಥೆಗಳಿಗೆ ನೀಡದೆ ಚರಂಡಿ ಅಥವಾ ಇತರ ಪ್ರದೇಶಗಳಲ್ಲಿ ಅನಧಿಕೃತವಾಗಿ ವಿಲೇವಾರಿ ಮಾಡುತ್ತಿದ್ದರೆ ಇಂತಹ ಹೋಟೆಲ್, ರೆಸ್ಟೋರೆಂಟ್, ಬಾರ್ ಮತ್ತು ಅಂಗಡಿಗಳ ವಾಣಿಜ್ಯ ಪರವಾನಿಗೆಯನ್ನು ರದ್ದು ಪಡಿಸುವಂತೆ ಹಾಗೂ ಈ ಬಗ್ಗೆ ಕೈಗೊಂಡ ಕ್ರಮದ ವಿವರಗಳನ್ನು ಸಲ್ಲಿಸುವಂತೆ ಈ ಮೂಲಕ ಕೋರಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಜಾರಿಗೊಳಿಸಿರುವ ನೋಟೀಸಿನಲ್ಲಿ ತಿಳಿಸಿದ್ದಾರೆ.