ಉಜಿರೆ: ಸಂವಿಧಾನ ಹಾಗೂ ಕಾಯ್ದೆಗಳು ಉತ್ತಮ ಸಮಾಜದ ನಿರ್ಮಾಣಕ್ಕೆ ಅತಿ ಅಗತ್ಯ. ಆದರೆ ಕಾನೂನುಗಳ ಕುರಿತಾದ ಮಾಹಿತಿಯಕೊರತೆಯಿಂದ ಸಾಮಾಜಿಕ ಪಿಡುಗುಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ.
ಶಾಲಾ ಕಾಲೇಜುಗಳಲ್ಲಿ ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಈ ಕುರಿತಾದ ಜಾಗೃತಿಯನ್ನು ಮೂಡಿಸಿದಲ್ಲಿ ಭವಿಷ್ಯದ ಪ್ರಜೆಗಳು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕಲು ಸಹಕಾರಿಯಾಗುತ್ತವೆ.
ಬಾಲ್ಯವಿವಾಹ ದಂತಹ ಪಿಡುಗುಗಳು ಲಿಂಗತ್ವ ಸಮಾನ ಸಮಾಜ ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಬೆಳ್ತಂಗಡಿಯ ಹಿರಿಯ ವಕೀಲೆ ಸುಭಾಷಿಣಿ ಆರ್ ಅಭಿಪ್ರಾಯಪಟ್ಟರು.ಅವರು ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಉಚಿತ ಕಾನೂನು ಸಲಹಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ, ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾನೂನು ಸಲಹಾ ಸಮಿತಿಯ ವಕೀಲರಾದ ಮುಮ್ತಾಜ್ ಬೇಗಂ ಹಾಗೂ ಪ್ರಿಯಾಂಕ ಕೆ.ವಿದ್ಯಾರ್ಥಿಗಳ ಸಂವಾದದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಮಾತನಾಡಿ , ಬಾಲ್ಯವಿವಾಹ ಬೆಳೆದು ಬಂದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ಇಪ್ಪತೊಂದನೆಯ ಶತಮಾನದಲ್ಲಿ ಈ ಪಿಡುಗು ಮುಂದುವರಿಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ದಿವ್ಯಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಉಪನ್ಯಾಸಕರಾದ ವಿಜಯಲಕ್ಷ್ಮಿ ಕರಡಿ ಪದ್ಮಶ್ರೀ ರಕ್ಷಿತ್ ಹಾಗೂ ಡಾ. ಸಾಜಿದಾ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ವಿಭಾಗ ಹಾಗೂ ಕಾನೂನು ಸಾಕ್ಷರತಾ ಸಂಘ ಕಾರ್ಯಕ್ರಮ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಮಲ್ಲಿಕಾ ಸ್ವಾಗತಿಸಿ ವಿದ್ಯಾರ್ಥಿ ವಿಷ್ಣು ಎಸ್ ಎಂ.ವಂದಿಸಿದರು.