Site icon Suddi Belthangady

2017ರ ಪೂರ್ವದ ಭೂಪರಿವರ್ತಿತ ನಿವೇಶನಗಳಿಗೆ ಮಹಾ ಯೋಜನೆಯ ನಿಯಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗೆ ಪ.ಪಂ ಸದಸ್ಯ ಜಗದೀಶ್ ಡಿ. ಮನವಿ

ಬೆಳ್ತಂಗಡಿ: 2017ರ ಪೂರ್ವದ ಭೂಪರಿವರ್ತಿತ ನಿವೇಶನಗಳಿಗೆ ಮಹಾ ಯೋಜನೆಯ ನಿಯಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗೆ ಪ.ಪಂ. ಸದಸ್ಯ ಜಗದೀಶ್ ಮನವಿ ಸಲ್ಲಿಸಿದ್ದಾರೆ.

ಪಟ್ಟಣ ಪಂಚಾಯತ್ ವ್ಯಾಪ್ತಿಗೊಳಪಟ್ಟ ನಿವೇಶನಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 2017ರ ಪೂರ್ವದಲ್ಲಿ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಯಾಗಿರುವ ಆಸ್ತಿಗಳನ್ನು ಹಾಗೂ ಅವುಗಳ ಅಂಶದ ಆಸ್ತಿಗಳಿಗೆ ಸಂಬಂಧಿಸಿದಂತೆ ಉದ್ದೇಶಿತ ಮಹಾಯೋಜನೆಯ ನಿಯಮಗಳಿಗೆ ಒಳಪಡಿಸದೆ 2017ರ ಪೂರ್ವದಲ್ಲಿ ನೀಡಿಕೊಂಡು ಬಂದಂತೆ ನಮೂನೆ-3 ಖಾತೆಯನ್ನು ಪ್ರಕೃತ ಇರುವ ಸ್ಥಿತಿಗನುಸರಿಸಿ ವಿನ್ಯಾಸ ನಕ್ಷೆ ನೀಡಿ ಅಧಿಕೃತ ನಿವೇಶನಗಳನ್ನಾಗಿ ಅನುಮೋದಿಸಲು ಸೂಕ್ತ ಆದೇಶ ನೀಡಿ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಹಾಗೂ 2017ರ ನಂತರದಲ್ಲಿ ಆಗಿರುವ ಕೃಷಿಯೇತರ ಜಮೀನಿಗೆ ಮಾತ್ರ ಮಹಾಯೋಜನೆಯ ನಿಯಮಗಳನ್ನು ನಿರ್ದೇಶಿಸುವರೇ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿವಾಸಿಗಳ ಪರವಾಗಿ ಕಳೆದ ನಾಲ್ಕು ವರ್ಷಗಳಿಂದ ಇದರ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಪ.ಪಂ. ಸದಸ್ಯ ಜಗದೀಶ್ ಡಿ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂಖಾನ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಹರೀಶ್ ಪೂಂಜ, ಎಂಎಲ್‌ಸಿಗಳಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ದ.ಕ ಜಿಲ್ಲಾಧಿಕಾರಿ, ಗ್ರಾಮೀಣ ಯೋಜನ ಸಹಾಯಕ ನಿರ್ದೇಶಕರು, ತಹಶೀಲ್ದಾರ್, ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಕೇವಲ 08.500 ಕಿ.ಮೀ. ವ್ಯಾಪ್ತಿ ಹೊಂದಿರುವ ಹಾಗೂ 7,500 ಜನಸಂಖ್ಯೆ ಇರುವ ಕರ್ನಾಟಕ ರಾಜ್ಯದ ಅತಿ ಸಣ್ಣ ಪಟ್ಟಣ ಪಂಚಾಯತ್ ಆಗಿದೆ. ಪ.ಪಂ.ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಧ್ಯಮ ವರ್ಗದ ಜನರು ಸರಕಾರಿ ನೌಕರರು, ನಿವೃತ್ತ ನೌಕರರು, ನಿವೃತ್ತ ಅಧಿಕಾರಿಗಳು ವಾಸ್ತವ್ಯವಿದ್ದು, ತಮ್ಮದೇ ಸ್ವಂತ ಮನೆ ನಿರ್ಮಿಸುವ ಕನಸು ಕಟ್ಟಿಕೊಂಡು ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೊಳಪಟ್ಟ ಆಸ್ತಿಯನ್ನು ವಿಂಗಡಿಸಿ ಸಣ್ಣ ಸಣ್ಣ ನಿವೇಶನಗಳನ್ನಾಗಿ ಪರಿವರ್ತಿಸಿರುವ ಜಮೀನನ್ನು ಖರೀದಿಸಿ, ತಮ್ಮ ಹೆಸರಲ್ಲಿ ಪಹಣಿ ಪಡೆದುಕೊಂಡಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಪತ್ರದಲ್ಲಿ ಏನಿದೆ:
ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಮಹಾ ಯೋಜನೆಯನ್ನು ಜಾರಿಗೆ ತರುವ 2017ರ ಪೂರ್ವದಲ್ಲಿ ಮಹಾ ಯೋಜನೆಯ ವಿಚಾರವನ್ನು ಪರಿಗಣಿಸದೆ ನಮೂನೆ-3 ಖಾತೆಯನ್ನು ನೀಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಸದ್ರಿ ನಮೂನೆ 3ರಂತೆ ಗುರುತಿಸಿರುವ ನಿವೇಶನಗಳನ್ನು ಜನ ಸಾಮಾನ್ಯರು, ತಮ್ಮ ಸ್ವಂತ ನಿವೇಶನ ಹೊಂದಿ ಮನೆ ನಿರ್ಮಿಸುವ ಕನಸಿನೊಂದಿಗೆ ಖರೀದಿಸಿದವರಿಗೆ ಸದ್ರಿ ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಕಟ್ಟಡ ಪರವಾನಿಗೆ ಅಪೇಕ್ಷಿಸಿ ಅರ್ಜಿ ಸಲ್ಲಿಸಿದಾಗ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅನ್ಯರಿಗೆ ವಿಕ್ರಯಿಸಿದ ಪ್ರಕರಣಗಳಲ್ಲಿ ಖರೀದಿದಾರರ ಹೆಸರಿಗೆ ನಮೂನೆ-3 ಖಾತೆಯನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮನೆ ನಿರ್ಮಿಸಿ ವಾಸ್ತವ್ಯವಿರುವ ಸಾರ್ವಜನಿಕರಿಗೆ ಸದ್ರಿ ಮನೆಯ ನವೀಕರಣ ಅಥವಾ ವಿಸ್ತರಣೆಗೆ ಸಂಬಂಧಿಸಿದಂತೆ ಕಟ್ಟಡ ಪರವಾನಿಗೆ ನೀಡಲು ಮಹಾ ಯೋಜನೆಯ ನಿಯಮ ಅಡ್ಡಿಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.

ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿಯಮಗಳನ್ನು ಸರಳೀಕರಣಗೊಳಿಸಿ 2017ರ ಪೂರ್ವದಲ್ಲಿ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತಿತ ಆಸ್ತಿಗಳನ್ನು ಹೊಂದಿರುವವರಿಗೆ ಮಹಾ ಯೋಜನೆಯ ನಿಯಮಗಳನ್ನು ಅನುಸರಿಸದೆ ಹಿಂದಿನಂತೆ ನಿವೇಶನಗಳ ವಿನ್ಯಾಸ ನಕ್ಷೆಯನ್ನು ಅನುಮೂದಿಸಿ ನಮೂನೆ-3 ಖಾತೆಯನ್ನು ನೀಡಿ ಅಧಿಕೃತ ನಿವೇಶನಗಳನ್ನಾಗಿ ಪರಿಗಣಿಸಿ ಅದರಂತೆ ಮನೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ೨ ಕಟ್ಟಡ ಪರವಾನಿಗೆಯನ್ನು ನೀಡಲು ಆದೇಶ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಮುಖೇನ ಸರಕಾರಕ್ಕೆ ಮನವಿಯಲ್ಲಿ ಸಲ್ಲಿಸಲಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ-ಜಗದೀಶ್ ಡಿ.: 2017-18ರ ಮುಂಚಿತವಾಗಿ ನಮೂನೆ-3 ಪಡೆದುಕೊಂಡವರಿಗೆ ಅನಧಿಕೃತವಾಗಿ ಮನೆ ಕಟ್ಟಿದವರಿಗೆ ಅಧಿಕೃತ ಮಾಡುವಂತೆ ಮನವಿ ಮಾಡಿದ್ದು ವಿಭಜನೆ ಪರಿರ್ವತನೆಗೆ ಅವಕಾಶ ನೀಡಬೇಕು. ಈಗಾಗಲೇ 2017-18ರ ಮುಂಚಿತವಾಗಿ ಒಂದು ಎಕ್ರೆ ಸ್ಥಳ ಭೂಪರಿರ್ವತನೆಗೊಂಡಿದ್ದು 10 ಮಂದಿ ತಲಾ 10 ಸೆಂಟ್ಸ್ ಖರೀದಿ ಮಾಡಿದವರು ಇದೀಗ ಮನೆ ನಿರ್ಮಾಣಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ವಿವಾಹಕ್ಕಾಗಿ ಬ್ಯಾಂಕ್ ಸಾಲ ಪಡೆಯಲು ಅಥವಾ ವಾರೀಸುದಾರರ ನೆಲೆಯಲ್ಲಿ ಹಕ್ಕಿನ ಜಮೀನನ್ನು ವಿಭಾಗಿಸಿಕೊಳ್ಳಲು ಆಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಲೇಔಟ್ ನಕ್ಷೆ ಇನ್ನು ಮುಂದಕ್ಕೆ 2018ರ ಈಚೆಗೆ ಇರುವವರಿಗೆ ಹೊಸದಾಗಿ ಲೇಔಟ್ ನಕ್ಷೆ ಮಾಡುವವರಿಗೆ ಮಾತ್ರ ಮೂಡದ ನಿಯಮವನ್ನು ಜಾರಿಗೆ ತನ್ನಿ.ಮಹಾ ಯೋಜನೆಯ ಜಾರಿಗೆ ಮೊದಲು ಸರಕಾರಕ್ಕೆ ಭೂಪರಿರ್ವತನೆಯ ಶುಲ್ಕ ಕಟ್ಟದವರ ವಿನ್ಯಾಸ ನಕ್ಷೆ ತೆಗೆದುಕೊಂಡವರ ಫಾರಂ-3 ತೆಗೆದುಕೊಂಡವರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ನೊಂದ ಭೂ ಮಾಲಕರರಿಗೆ ನ್ಯಾಯ ಒದಗಿಸಿಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ವಿನಂತಿಸಿದ್ದಾರೆ.

Exit mobile version