Site icon Suddi Belthangady

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ವ್ಯವಹಾರ್’ ಮಾರಾಟ ಮೇಳ- ಮಳಿಗೆಗಳನ್ನು ತೆರೆದು ಭರ್ಜರಿ ವ್ಯಾಪಾರ ಮಾಡಿದ ವಿದ್ಯಾರ್ಥಿಗಳು

ಉಜಿರೆ: ವಾಣಿಜ್ಯ ವಿದ್ಯಾರ್ಥಿಗಳಿಗೆ ವ್ಯಾಪಾರ- ವ್ಯವಹಾರದ ಪ್ರಾಯೋಗಿಕ ಅನುಭವ ಒದಗಿಸುವ ನಿಟ್ಟಿನಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಒಂದು ದಿನದ ಮಾರಾಟ ಮೇಳ ‘ವ್ಯವಹಾರ್’ ನ. 4ರಂದು ನಡೆಯಿತು.ಕಾಲೇಜು ಒಳಾಂಗಣದಲ್ಲಿ ಮಳಿಗೆಗಳನ್ನು ತೆರೆದ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ಮಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಮೇಳಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಳಿಗೆ ಉದ್ಘಾಟಿಸಿದರು. ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ಜೈನ್ ಅವರು ಮಳಿಗೆಗಳಿಗೆ ಪರವಾನಗಿ ಪತ್ರ ಹಸ್ತಾಂತರಿಸಿದರು.

ಉದ್ಘಾಟನೆ ವೇಳೆ ವಿದ್ಯಾರ್ಥಿಗಳ ಚೆಂಡೆ ವಾದನ, ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಗೊಂಬೆ ವೇಷಧಾರಿಗಳು ಮನರಂಜಿಸಿದರು.

ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್, ಆಡಳಿತ ಕುಲಸಚಿವೆ ಡಾ. ಶಲೀಪ್ ಕುಮಾರಿ, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವೃಂದದವರು, ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ ಎನ್. ಮತ್ತಿತರರು ಉಪಸ್ಥಿತರಿದ್ದರು.

ಮೇಳದಲ್ಲಿ 23 ಮಳಿಗೆಗಳನ್ನು ತೆರೆಯಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಮಳಿಗೆಗಳನ್ನು ಹರಾಜು ಪ್ರಕ್ರಿಯೆ (ಕನಿಷ್ಠ 500 ರೂ.ಗಳಿಂದ ಆರಂಭವಾಗಿ ಗರಿಷ್ಠ 2,800 ರೂ.ಗಳವರೆಗೆ) ಮೂಲಕ ಕಾಯ್ದಿರಿಸಿ ಹೂ, ಬಾಳೆ ಎಲೆ, ಬಲೂನುಗಳಿಂದ ಅಲಂಕರಿಸಿ ಮಾರಾಟ ನಡೆಸಿದರು. ಸ್ಥಳೀಯ ಇತರ ವ್ಯಾವಹಾರಿಕ ಸಂಸ್ಥೆಗಳೊಂದಿಗೆ ವ್ಯವಹಾರ ಕುದುರಿಸಿಕೊಂಡು ಜಂಟಿಯಾಗಿ ವ್ಯಾಪಾರದಲ್ಲಿ ತೊಡಗಿದ್ದು ಕೂಡ ಕಂಡುಬಂತು.

ಮನೆಯಲ್ಲಿ ಬೆಳೆದ ಹಣ್ಣು- ತರಕಾರಿ, ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ವಿಶೇಷ ಆಕರ್ಷಣೆಯಾಗಿದ್ದರೆ, ಐಸ್ ಕ್ರೀಮ್‌ ಮತ್ತು ಪಾನಿಪೂರಿಯಂಥ ಚಾಟ್ ಖಾದ್ಯಗಳಿಗೆ ಬೇಡಿಕೆ ಕಂಡು ಬಂತು. ದೋಸೆ ಮಳಿಗೆಯಲ್ಲಿ 5 ಬಗೆಯ ದೋಸೆಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ತಂಪು ಪಾನೀಯಗಳು, ಮಿಲ್ಕ್ ಶೇಕ್ ಇತ್ಯಾದಿ ಆಹಾರ ಪದಾರ್ಥಗಳಷ್ಟೇ ಅಲ್ಲದೆ, ಕಿವಿಯೋಲೆ, ಪರ್ಸ್ ಇತ್ಯಾದಿ ಉತ್ಪನ್ನಗಳು ಕೂಡ ಮಾರಾಟಕ್ಕಿದ್ದವು. ಕೆಲವು ಆಟದ ಮಳಿಗೆಗಳನ್ನು ಕೂಡ ತೆರೆಯಲಾಗಿತ್ತು.

ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಕೂಡ ಮಾರಾಟ ಮೇಳದಲ್ಲಿ ಪಾಲ್ಗೊಂಡು ಖರೀದಿಯಲ್ಲಿ ತೊಡಗಿದರು.

“ಜ್ಞಾನದ ಅಳವಡಿಕೆ ನೈಜ ಜೀವನದಲ್ಲಿ ಸಾಧ್ಯವಾದಾಗ ಮಾತ್ರವೇ ಸಾರ್ಥಕವೆನಿಸಬಲ್ಲದು. ಹೀಗಾಗಿ ವಾಣಿಜ್ಯಶಾಸ್ತ್ರ ಅಧ್ಯಯನದಲ್ಲಿ ಬರುವ ವ್ಯವಹಾರ ಜ್ಞಾನದ ಭಾಗವಾದ ವಾಣಿಜ್ಯ ಒಡಂಬಡಿಕೆ, ಆರ್ಥಿಕ ಒಪ್ಪಂದ, ಹೂಡಿಕೆ, ಲಾಭ, ನಷ್ಟ, ಹರಾಜು ಪ್ರಕ್ರಿಯೆಗಳ ಯಥಾರ್ಥ ಪರಿಕಲ್ಪನೆ ವಿದ್ಯಾರ್ಥಿ ವೃಂದಕ್ಕೆ ದೊರಕಲೆಂದು ವ್ಯವಹಾರ್ ಮೇಳವನ್ನು ಆಯೋಜಿಸಲಾಗಿದೆ”, ಎಂದು ವಿಭಾಗ ತಿಳಿಸಿದೆ.

Exit mobile version