Site icon Suddi Belthangady

ಉಜಿರೆ: ತಂದೆ-ಮಗನ ನಡುವೆ ಜಗಳ: ಚಾಕು ಇರಿದು ತಂದೆಯಿಂದಲೇ ಮಗನ ಕೊಲೆ

ಉಜಿರೆ: ಕ್ಷುಲ್ಲಕ ಕಾರಣಕ್ಕೆ ತಂದೆ ಮತ್ತು ಮಗನ ನಡುವೆ ನಡೆದ ಜಗಳವೊಂದು ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಅ.29ರಂದು ಉಜಿರೆಯ ಕೊಡೆಕಲ್ಲು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ (75ವ) ಎಂಬವರು ಅ.29ರಂದು ಎಂದಿನಂತೆ ಮಲಗಿರುವ ವೇಳೆ ಅವರ ಮಗ ಜಗದೀಶ್ ಅಚಾರಿ (31ವ) ಅವರು ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಮಾತು ಆರಂಭಿಸಿದ್ದು, ಇದು ಮಾತಿಗೆ ಮಾತು ಬೆಳೆದು ಕೋಪಗೊಂಡ ತಂದೆ ಕೃಷ್ಣಯ್ಯ ಆಚಾರಿ ಎಂಬವರು ಮಗನ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾರೆ.ಈ ವೇಳೆ ತೀವ್ರವಾಗಿ ಗಾಯಗೊಂಡ ಜಗದೀಶ್ ಅವರನ್ನು ಮನೆಯವರು ಸೇರಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಸಾವನ್ನಪ್ಪಿದ್ದಾರೆ.

ಕೃತ್ಯಕ್ಕೆ ಬಳಸಿದ ಚೂರಿಯನ್ನು ಕೃಷ್ಣಯ್ಯ ಆಚಾರಿ ಅವರು 1960ರಲ್ಲಿ ಖರೀದಿಸಿ ತನ್ನ ಕಪಾಟಿನಲ್ಲಿ ಇಟ್ಟಿದ್ದಾಗಿ ತಿಳಿದುಬಂದಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಜಗದೀಶ್ ಅವರ ಮೃತದೇಹವನ್ನು ಇಂದು (ಅ.30ರಂದು) ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಆರೋಪಿ ಕೃಷ್ಣಯ್ಯ ಅಚಾರಿ ಎಂಬವರಿಗೆ ಇಬ್ಬರು ಹೆಣ್ಣು, ಐದು ಜನ ಗಂಡು ಮಕ್ಕಳು ಇದ್ದಾರೆ.

Exit mobile version