Site icon Suddi Belthangady

ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

ಸವಣಾಲು: ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಅ.15ರಿಂದ 24ರವರೆಗೆ ನಡೆಯಿತು.

ಶರನ್ನವರಾತ್ರಿಯ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು.ಶಾರದಾ ಪೂಜೆಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ, ಅಕ್ಷರಾಭ್ಯಾಸ ಕಾರ್ಯಕ್ರಮವೂ ನೆರವೇರಿತು.

ನವರಾತ್ರಿಯ ಅಷ್ಟಮಿಯ ದಿನ ಅ.22ರಂದು ಕಾಳಿಗುಡಿಯಲ್ಲಿ ಬೆಳಗ್ಗೆ ತೆನೆ ಪೂಜೆ, ಶ್ರೀ ಕಾಳಿಕಾಂಬ ದೇವಿಗೆ ಮದ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆ ನಡೆಯಿತು. ಶ್ರೀ ಗಜಾನನ ಭಟ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಕೂಡ ಜರುಗಿತು.

ನವರಾತ್ರಿಯ ನವಮಿಯ ದಿನ ಅ.23ರಂದು ಮೂಲ ದುರ್ಗಾ ಗುಡಿಯಲ್ಲಿ ರಾತ್ರಿ ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆ, ವಾಹನ ಪೂಜೆ ನೆರವೇರಿತು.

ವಿಜಯ ದಶಮಿಯ ದಿನ ಅ.24ರಂದು ಸಾರ್ವಜನಿಕ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ಹಾಗೂ ರಾತ್ರಿ ಶಾರದಾ ವಿಸರ್ಜನೆ ಹಾಗೂ ಶಮೀ ಪೂಜೆಯೊಂದಿಗೆ ನವರಾತ್ರಿ ಉತ್ಸವವು ಸಮಾಪ್ತಿಗೊಂಡಿತು.

ಊರ ಹಾಗೂ ಪರವೂರ ಭಕ್ತರೆಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು.

Exit mobile version