ಉಜಿರೆ: ಸನಾತನ ಧರ್ಮದ ಮೇಲೆ ನಂಬಿಕೆಯಿಟ್ಟಿರುವ ಭಕ್ತರು ಕೊಲ್ಲೂರಿನಿಂದ ಧರ್ಮಸ್ಥಳದೆಡೆಗೆ ಕೈಗೊಂಡಿರುವ ಧರ್ಮಸಂರಕ್ಷಣಾ ಯಾತ್ರೆಯ ಬಗ್ಗೆ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಯಿತು.
ಕೊಲ್ಲೂರಿನ ಅಪ್ಪಣ್ಣ ಹೆಗ್ಡೆ ಮತ್ತು ಶರತ್ ಕೃಷ್ಣರವರ ಸಂಚಾಲಕತ್ವದಲ್ಲಿ ಈ ಧರ್ಮಸಂರಕ್ಷಣಾ ರಥ ಯಾತ್ರೆ ಕೊಲ್ಲೂರಿನಿಂದ ಕದ್ರಿ ಮಂಜುನಾಥ ದೇವಾಲಯಕ್ಕೆ ಬಂದು ನಂತರ ಉಜಿರೆ ಜನಾರ್ಧನ ಸ್ವಾಮಿ ದೇವಾಲಯಕ್ಕೆ ಆಗಮಿಸಲಿದೆ. ನಂತರ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಅಕ್ಟೋಬರ್ 29ರಂದು ಮಧ್ಯಾಹ್ನ 3ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
ನಮ್ಮ ಧರ್ಮದ ಮೇಲೆ, ನಾವು ನಂಬಿದ ಕ್ಷೇತ್ರಗಳ ಮೇಲಾಗುತ್ತಿರುವ ದಾಳಿಯನ್ನು ಕೊನೆಗಾಣಿಸಬೇಕು ಎಂಬ ಉದ್ದೇಶದಿಂದ ಈ ರಥಯಾತ್ರೆ ನಡೆಯಲಿದೆ ಎಂದು ಧನಂಜಯ ರಾವ್ ವಿವರಿಸಿದರು.
ಧರ್ಮ ಸಂರಕ್ಷಣಾ ಯಾತ್ರೆಯ ಯಶಸ್ಸಿಗಾಗಿ ಧರ್ಮಜಾಗೃತಿ ಸಮಿತಿ ರಚನೆ, ಸಂಚಾಲಕರಾಗಿ ಶಶಿಧರ್ ಶೆಟ್ಟಿ ಬರೋಡಾ ನೇಮಕ: ತಾಲೂಕು ಧರ್ಮಸಂರಕ್ಷಣಾ ಯಾತ್ರೆಯ ಸ್ವಾಗತಿಸಲು ಧರ್ಮ ಜಾಗೃತಿ ಸಮಿತಿಯ ಸಂಚಾಲಕರಾಗಿ ಬರೋಡಾದ ಉದ್ಯಮಿ ಶಶಿಧರ್ ಶೆಟ್ಟಿಯವರನ್ನು ನೇಮಿಸಲಾಯಿತು.ಸಂಚಾಲಕರ ನೆಲೆಯಲ್ಲಿ ಮಂಜುನಾಥ ಸ್ವಾಮಿಯ ಓಂಕಾರದೊಂದಿದೆ ಶಶಿಧರ ಶೆಟ್ಟಿಯವರು ಮಾತನಾಡಿ “ಧರ್ಮಸ್ಥಳ ಅಂತ ಹೇಳಿದ ಕೂಡಲೇ ನಮಗೆ ಅಪಾರ ಗೌರವ ಸಿಗುತ್ತಿದೆ. ಈ ಯಾತ್ರೆಯಲ್ಲಿ ಸ್ವಾಮೀಜಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ.ಯಾವುದೇ ವೇದಿಕೆಗಳಿರುವುದಿಲ್ಲ.ರಾಜಕೀಯ ರಹಿತವಾಗಿ ಧರ್ಮಸ್ಥಳದ ಭಕ್ತರೆಲ್ಲರು ಭಾಗಿಯಾಗಬಹುದು.ಇದು ಭಕ್ತರು ಸೇರಿಕೊಂಡು ಮಾಡುವ ಕಾರ್ಯಕ್ರಮ. ಈ ಕಾರ್ಯಕ್ರಮ ಆದ ನಂತರ ಯಾವ ಕಾಮೆಂಟ್ಸ್ ಬಂದರೂ ಅದಕ್ಕೆ ಪ್ರತಿಕ್ರಿಯಿಸಬೇಡಿ. ಈ ಕಾರ್ಯಕ್ರಮದಲ್ಲಿ ನಾವಾಗಿಯೇ ತೊಡಗಿಕೊಂಡಿದ್ದೇವೆ.ಈ ಕಾರ್ಯಕ್ರಮ ಎಲ್ಲರೂ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ “ಸಮಾಜದ ದೃಷ್ಟಿಯಲ್ಲಿ ಸನಾತನ ಪರಂಪರೆಯ ದೃಷ್ಟಿಯಲ್ಲಿ ದೇವಸ್ಥಾನಗಳು ಶ್ರದ್ಧಾಕೇಂದ್ರಗಳು ಮಾತ್ರವಲ್ಲದೇ ನಮ್ಮನ್ನು ಎಚ್ಚರಿಸುವ ಜಾಗೃತಿ ಕೇಂದ್ರಗಳಾಗಿವೆ. ಆ ನಂಬಿಕೆಯ ಕಾರಣಕ್ಕೆ ಸಾವಿರ ಸಾವಿರ ವರ್ಷಗಳಿಂದ ದೇವಸ್ಥಾನ ಮತ್ತು ದೇವರ ಆರಾಧನೆ ನಡೆಯುತ್ತಿದೆ. ಧರ್ಮಪೀಠಗಳಲ್ಲಿ ಕುಳಿತು ಪರಂಪರಾಗತವಾಗಿ ಏನಾದರೂ ಒಂದು ಮಾತು ಹೇಳಿದರೆ ಅದು ಸಮಾಜದಲ್ಲೊಂದು ಧನಾತ್ಮಕ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾದ ವಸಂತ ಗಿಳಿಯಾರ್ ಮಾತನಾಡಿ “ಧರ್ಮಿಷ್ಟರು ಧರ್ಮ ಕಾರ್ಯಕ್ಕಾಗಿ ಸೇರಿದ್ದೇವೆ. ಧರ್ಮ ಸಂರಕ್ಷಣಾ ಯಾತ್ರೆಯ ಪಾದಯಾತ್ರೆಯ ನಂತರ ಯಾವುದೇ ಭಾಷಣಗಳಿರುವುದಿಲ್ಲ. ಇದು ಬಿಜೆಪಿ ಪ್ರಾಯೋಜಿತ ಅಥವಾ ಬಿಜೆಪಿ ಅಜೆಂಡವಾಗಿ ನಡೆಯುವ ಕಾರ್ಯವಲ್ಲ, ಬದಲಾಗಿ ಧರ್ಮವನ್ನು ಗೌರವಿಸುವವರು ಈ ಯಾತ್ರೆಯಲ್ಲಿ ಭಾಗಿಯಾಗಬಹುದು. ರಾಜಕೀಯ ವಲಯದ ಪ್ರಮುಖರು, ಧಾರ್ಮಿಕ ಸಂಸ್ಥೆಗಳ ಪ್ರಮುಖರು ಭಾಗಿಯಾಗುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದ ಯಶಸ್ಸಿಗಾಗಿ ಅಕ್ಟೋಬರ್ 22ರಂದು ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಮಾತೃ ಶಕ್ತಿ ಜಾಗರಣದವರಿಂದ ಮಹಿಷಮರ್ಧಿನಿ ಸ್ತೋತ್ರ ಪಠಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತಗಾರ ಶರತ್ ಕೃಷ್ಣ ಪಡ್ವೆಟ್ನಾಯ, ಹಿರಿಯರಾದ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರಾದ ವಸಂತ ಸಾಲಿಯಾನ್, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಉಜಿರೆ ಎಸ್ ಡಿ ಎಂ ಶಿಕ್ಷ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಮಹೇಶ್ ತುಪ್ಪೆಕಲ್ಲು, ರಾಜು ಪೂಜಾರಿ, ಹರ್ಷೇಂದ್ರ ಜೈನ್ ಬೆಂಗಳೂರು, ಪೂರನ್ ವರ್ಮ, ಸುಬ್ರಹ್ಮಣ್ಯ ಪ್ರಸಾದ್, ಅಶೋಕ್ ಭಟ್ ಉಜಿರೆ, ಡಾ.ಜಯಕುಮಾರ್ ಶೆಟ್ಟಿ, ಬಿ ಎ ಕುಮಾರ್ ಹೆಗ್ಡೆ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.ಹಿರಿಯ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ರವರು ನಿರೂಪಣೆ ಮಾಡಿದರು.