Site icon Suddi Belthangady

ಬೆಳ್ತಂಗಡಿ ಬಿಜೆಪಿಯಿಂದ ಕರ್ನಾಟಕ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ- ಸಚಿವರ ಆಪ್ತ ಗುತ್ತಿಗೆದಾರರ ಮನೆಯಲ್ಲಿ ದಾಖಲೆಯಿಲ್ಲದೆ ಪತ್ತೆಯಾದ 42ಕೋಟಿ ಬಗ್ಗೆ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ

ಬೆಳ್ತಂಗಡಿ: ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲದ ವತಿಯಿಂದ ಕರ್ನಾಟಕ ಸರಕಾರದ ಜನ ವಿರೋಧಿ ಆಡಳಿತದ ವಿರುದ್ಧ ಅ.18 ರಂದು ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಭಾರಿ ಭ್ರಷ್ಟಚಾರದಲ್ಲಿ ತೊಡಗಿದ್ದು, ಸಚಿವರೊಬ್ಬರ ಆಪ್ತ ಗುತ್ತಿಗೆದಾರರ ಮನೆಯಲ್ಲಿ ರೂಪಾಯಿ 42 ಕೋಟಿ ಯಾವುದೇ ದಾಖಲೆಗಳಿಲ್ಲದೆ ಪತ್ತೆಯಾಗಿದ್ದು, ಇದು ಸರಕಾರ ಕಮಿಷನ್ ರೂಪದಲ್ಲಿ ಪಡೆದಿರುವ ಹಣವೆಂಬ ಗುಮಾನಿಯಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸರಕಾರದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು.

ರಾಜ್ಯ ಸರಕಾರದ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದು, ವಿರೋಧ ಪಕ್ಷಗಳ ಪ್ರಮುಖರ ಮತ್ತು ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸುಗಳನ್ನು ದಾಖಲಿಸುತ್ತಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನವನ್ನು ಸರಕಾರಕ್ಕೆ ನೀಡಬೇಕು ಹಾಗೂ ಸರಕಾರ ಅನುಸರಿಸುತ್ತಿರುವ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಉದ್ಘಾಟನೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಮತ್ತು ಬಿಜೆಪಿ ಜಿಲ್ಲಾ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿದರು.

ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ತಹಶೀಲ್ದಾರ್ ಟಿ.ಸುರೇಶ್ ಕುಮಾರ್ ರಿಗೆ ಮನವಿ ಸಲ್ಲಿಸಿದರು.

ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಧಮಸ್ಥಳ, ಗಣೇಶ್ ಗೌಡ ನಾವೂರು, ಪಕ್ಷದ ಪ್ರಮುಖರು, ಗ್ರಾ.ಪಂ ಅಧ್ಯಕ್ಷರುಗಳು, ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

Exit mobile version