ಉಜಿರೆ: ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿದ್ದ ನಲವತ್ತೆಂಟು ಗಂಟೆಗಳಲ್ಲಿ ಕಿರುಚಿತ್ರ ನಿರ್ಮಿಸುವ ರಾಷ್ಟ್ರಮಟ್ಟದ ಸ್ಪರ್ಧೆ ‘ಸಿನಿಮೇಟ್ಸ್’ನಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ (ಸ್ನಾತಕ ಮತ್ತು ಸ್ನಾತಕೋತ್ತರ) ವಿದ್ಯಾರ್ಥಿಗಳ ‘ಮೌನವೆ ಒಂದ್ ಮಾತು’ ಕಿರುಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರನಟಿ ಮಾನ್ವಿತಾ ಕಾಮತ್ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪರ್ಧೆಯಲ್ಲಿ ಕೇರಳ ಸಹಿತ ವಿವಿಧೆಡೆಗಳಿಂದ ಒಟ್ಟು 100 ಕಿರುಚಿತ್ರಗಳು ಭಾಗವಹಿಸಿದ್ದವು.
ವಿದ್ಯಾರ್ಥಿ ಕಿರಣ್ ಕುಲಕರ್ಣಿ ನಿರ್ದೇಶನದ ಕಿರುಚಿತ್ರವು ಶಾಮ ಪ್ರಸಾದ್ ಎಚ್.ಪಿ., ಗ್ಲೆನ್ ಗುಂಪಲಾಜೆ ಹಾಗೂ ಪ್ರಧಾನ್ ಎನ್. ನಂದ ಅವರ ಸೃಜನಶೀಲ ತಂಡದ ಮೂಲಕ ಮೂಡಿಬಂದಿದೆ. ಮುಖ್ಯ ಪಾತ್ರದಲ್ಲಿ ಶಿವಕುಮಾರ್ ಹಾಗೂ ಭಾವನಾ ನಟಿಸಿದ್ದಾರೆ.
ಚಿತ್ರಕ್ಕೆ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ, ಸಹಾಯಕ ಪ್ರಾಧ್ಯಾಪಕ, ಎಸ್.ಡಿ.ಎಂ. ಮಲ್ಟಿ ಮೀಡಿಯಾ ಸ್ಟುಡಿಯೋದ ಕಾರ್ಯಕಾರಿ ನಿರ್ಮಾಪಕ ಸುನಿಲ್ ಹೆಗ್ಡೆ ಮತ್ತು ಎಸ್.ಡಿ.ಎಂ. ಮಲ್ಟಿ ಮೀಡಿಯಾ ಸ್ಟುಡಿಯೋದ ವೀಡಿಯೋ ಪ್ರೊಡಕ್ಷನ್ ಡೈರೆಕ್ಟರ್ ರಕ್ಷಿತ್ ರೈ ಮಾರ್ಗದರ್ಶನ ಮಾಡಿದ್ದಾರೆ.
ಪ್ರೀತಿಗೆ ಕೇವಲ ಮಾತುಗಳಷ್ಟೇ ಅಲ್ಲ, ಭಾವನೆಗಳೂ ಮುಖ್ಯ ಎಂಬುದನ್ನು ‘ಮೌನವೆ ಒಂದ್ ಮಾತು’ ಕಿರುಚಿತ್ರ ನಿರೂಪಿಸುತ್ತದೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.