ಗೇರುಕಟ್ಚೆ: ಅ.12 ರಂದು ಸಂಜೆ ಸುರಿದ ಭಾರೀ ಮಳೆಗೆ ಟಾರು ರಸ್ತೆಯಲ್ಲಿ ರಾಶಿ-ರಾಶಿ ಮಣ್ಣು ಬಿದ್ದು ದ್ವಿಚಕ್ರ, ಆಟೋ ಹಾಗೂ ಇತರ ವಾಹನಗಳು ಚಲಾಯಿಸಲು ತೊಂದರೆ ಉಂಟಾಗಿದೆ.
ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ಜನತಾ ಕಾಲೋನಿ, ಪೇಟೆ ಹಾಗೂ ಕೊರಂಜ ಶಾಲಾ ಪಕ್ಕ ಚರಂಡಿ ಮುಚ್ಚಿ ಹೋದ ಪರಿಣಾಮ ರಸ್ತೆಯಲ್ಲಿ ಮೊಣಕಾಲಿನಷ್ಟು ಎತ್ತರಕ್ಕೆ ಮಳೆ ನೀರು ಹರಿಯುತ್ತದೆ. ಹಾಗೂ ರಸ್ತೆಯಲ್ಲಿ ಯಮ ಸ್ವರೂಪದ ಗುಂಡಿ ಸೃಷ್ಟಿಯಾಗಿದೆ. ವಾಹನಗಳ ಚಾಲಕರು ಹಾಗೂ ಸಾರ್ವಜನಿಕರು ನಡೆದಾಡಲು ತುಂಬಾ ಕಷ್ಟ ಪಡುವಂತಾಗಿದೆ.
ಕಳಿಯ ಗ್ರಾಮ ಪಂಚಾಯತ್ ವತಿಯಿಂದ ನಡೆದ ಜಮಾ ಮಂದಿ ಸಭೆಯಲ್ಲಿ ಗ್ರಾಮಸ್ಥರು ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾ ಪರಿಷತ್ತ್ ವಿಭಾಗದ ಬೆಳ್ತಂಗಡಿ ಅಭಿಯಂತರು ಗಂಭೀರವಾಗಿ ಪರಿಗಣಿಸಿ ತಿಂಗಳೊಳಗೆ ಸರಿಪಡಿಸುವ ಭರವಸೆ ನೀಡಿದರು.ಆದರೆ ಈ ತನಕ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.ಶಾಸಕರು, ವಿಧಾನ ಸಭಾ ಸದಸ್ಯರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಯ ಮೂಲಕ ಸರಿಪಡಿಸಲು ಗ್ರಾಮಸ್ಥರು ಒತ್ತಾಯಿಸಿದರು.