ಬೆಳ್ತಂಗಡಿ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನದಿಗೆ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ವಿಚಾರದಲ್ಲಿ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ನೆರಿಯ ಗ್ರಾ.ಪಂ.ವ್ಯಾಪ್ತಿಯ ಅಣಿಯೂರು ಕೋಲೋಡಿ ಮತ್ತು ಪುಲ್ಲಾಜೆ ಕೋಲ್ನ ಎಂಬಲ್ಲಿ ಇರುವ ನದಿಗೆ ಸೇತುವೆ ನಿರ್ಮಾಣ ಆಗದೇ ಇರುವ ಕಾರಣ ಅ. 11ರಂದು ಪುಲ್ಲಾಜೆಯ ಯುವಕ ಬೈಕಿನಲ್ಲಿ ನದಿ ದಾಟುತ್ತಿರುವ ವೇಳೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡು ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಲ್ಲಿದ್ದರು.ಇದನ್ನು ನೋಡಿದ ಸ್ಥಳೀಯರು ಯುವಕನನ್ನು ಅಪಾಯದಿಂದ ಪಾರು ಮಾಡಿದ್ದರು.ಬಳಿಕ ಸ್ಥಳೀಯರು ತಕ್ಷಣ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಅವರಿಗೆ ಸೇತುವೆ ನಿರ್ಮಿಸಲು ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ನಾನು ಪಂಚಾಯತ್ ಕೆಲಸದವಳಲ್ಲ ಎಂದು ಉಡಾಫೆಯ ಉತ್ತರವನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಅ.12ರಂದು ಪಂಚಾಯಿತಿ ಕಚೇರಿಗೆ ಏಕಾಏಕಿ ಮುತ್ತಿಗೆ ಹಾಕಿದ್ದಾರೆ.
ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.