ಬೆಳ್ತಂಗಡಿ: ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯೊಂದಿಗೆ ಬೀಸಿದ ಗಾಳಿಗೆ ಮುಂಡಾಜೆ ಗ್ರಾಮದ ಕಡಂಬಳ್ಳಿ, ಮುಂಡಾಜೆ ವಾಳ್ಯ, ಪರಮುಖ, ದುಂಬೆಟ್ಟು, ಕುಳೂರು ಮೊದಲಾದ ಪರಿಸರದಲ್ಲಿ ಕಲ್ಮಂಜ ಗ್ರಾಮದ ಆನಂಗಳ್ಳಿ, ಪರಾರಿ, ಒಂಜರೆಬೈಲು, ಮೂಲಾರು ಸೇರಿದಂತೆ ಅನೇಕ ಕಡೆಗಳಲ್ಲಿ ಒಟ್ಟು ಸಾವಿರಾರು ಅಡಿಕೆ ಮರ, ಬಾಳೆ ಗಿಡ, ತೆಂಗಿನ ಮರ ಇತ್ಯಾದಿ ಧರಾಶಾಯಿಯಾಗಿ ಲಕ್ಷಾಂತರ ರೂ.ಮೌಲ್ಯದ ಕೃಷಿ ಹಾನಿ ಸಂಭವಿಸಿದೆ.
ಕೆಲವು ಕಡೆ ತೋಟಗಳಲ್ಲಿ ಮರಗಳು ಉರುಳಿ ಬಿದ್ದಿವೆ.ಕಡಂಬಳ್ಳಿಯ ವಿಶ್ವನಾಥ ಪಟವರ್ಧನ್ ಎಂಬುವರ ತೋಟದಲ್ಲಿ 50ಕ್ಕಿಂತ ಅಧಿಕ ಅಡಕೆ ಮರ, ಪ್ರಶಾಂತ ನಾತು ಎಂಬವರ ತೋಟದಲ್ಲಿ 60ಕ್ಕಿಂತ ಅಧಿಕ ಅಡಕೆ ಮರ ಸೇರಿದಂತೆ ಹೆಚ್ಚಿನ ತೋಟಗಳಲ್ಲಿ ಹಾನಿ ಸಂಭವಿಸಿದೆ.
ಮುಂಡಾಜೆ ಗ್ರಾಮದ ನೆಯ್ಯಾಲು ಎಂಬಲ್ಲಿ ರವಿಚಂದ್ರ ಎಂಬವರ ತೋಟಕ್ಕೆ ತೋಡಿನ ನೀರು ನುಗ್ಗಿ ಕಳೆದ ಎರಡು ದಿನಗಳ ಹಿಂದೆ ಅಡಕೆ ಮರಗಳಿಗೆ ಹಾಕಲಾಗಿದ್ದ ಗೊಬ್ಬರ ನೀರು ಪಾಲಾಗಿದ್ದು ಸುಮಾರು ರೂ.55,000 ಕ್ಕಿಂತ ಅಧಿಕ ನಷ್ಟ ಸಂಭವಿಸಿದೆ.
ಸಿಡಿಲಿನಿಂದ ಅನೇಕರ ಗೃಹ ಉಪಯೋಗಿ ವಿದ್ಯುತ್ ಪರಿಕರಗಳಿಗೆ ಹಾನಿ ಉಂಟಾಗಿದೆ.
ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ ಹಾನಿ ಉಂಟಾದ ಪರಿಸರಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಕರಿಸಿದರು.
20 ವಿದ್ಯುತ್ ಕಂಬ ಮುರಿತ:
ಮುಂಡಾಜೆ- ದಿಡುಪೆ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಇಲ್ಲಿನ ಮಸೀದಿ ಸಮೀಪ ಐದು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.ಉಳಿದಂತೆ ಚಾರ್ಮಾಡಿ, ಉಜಿರೆ, ಕಕ್ಕಿಂಜೆ, ತೋಟತ್ತಾಡಿ, ನೆರಿಯ
ಮೊದಲಾದ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮುರಿದಿದ್ದು ಮೆಸ್ಕಾಂಗೆ ರೂ.3 ಲಕ್ಷಕ್ಕಿಂತ ಅಧಿಕ ನಷ್ಟ ಉಂಟಾಗಿದೆ.ಅಲ್ಲಲ್ಲಿ ವಿದ್ಯುತ್ ತಂತಿಗಳು ಮುರಿದುಬಿದ್ದಿದ್ದು ಅನೇಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಉಜಿರೆ ಉಪ ವಿಭಾಗ ಮತ್ತು ಸೋಮಂತಡ್ಕ ಶಾಖಾ ಕಛೇರಿ ಸಿಬ್ಬಂದಿ ವಿದ್ಯುತ್ ತಂತಿ, ಕಂಬಗಳ ಜೋಡಣೆ ಇತ್ಯಾದಿ ಕೆಲಸಗಳಿಗೆ ಹರಸಾಹಸ ನಡೆಸುತ್ತಿದ್ದಾರೆ.ಉಜಿರೆ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮೀನ್ ಬ್ರ್ಯಾಗ್ಸ್, ಸೋಮಂತಡ್ಕದ ಜೆಇ ಕೃಷ್ಣೇಗೌಡ ಹಾನಿ ಉಂಟಾದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.