Site icon Suddi Belthangady

ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆಯಲ್ಲಿ NMMS ಪರೀಕ್ಷೆಗಾಗಿ ಇಂದಿನಿಂದ (ಅ.09)ಉಚಿತ ತರಬೇತಿ ಆರಂಭ

ಬೆಳ್ತಂಗಡಿ: ಕಳೆದ 2020 ರ ಕೊರೋನಾ ಸಂಕಷ್ಟದ ಕಾಲದಲ್ಲಿ ಸ.ಉ.ಪ್ರಾ.ಶಾಲೆ ಮಾಯ ಇಲ್ಲಿ ಆರಂಭವಾದ ಇ-ಶಾಲೆ ಮಾಯ ಆನ್ಲೈನ್ ತರಬೇತಿಯು ಬದಲಾದ ರೂಪದಲ್ಲಿ 2021 ರಿಂದ ಇ-ಶಾಲೆ ಬೆಳ್ತಂಗಡಿ ಯಾಗಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿಸ್ತರಿಸಿದ್ದು, ಕಳೆದ ಎರಡು ವರ್ಷಗಳಿಂದ NMMS ಪರೀಕ್ಷೆಗಾಗಿ ಉಚಿತ ಆನ್ಲೈನ್ ತರಬೇತಿ ನೀಡುತ್ತಾ ಬಂದಿದೆ.

ಇ-ಶಾಲೆ ಬೆಳ್ತಂಗಡಿ ಎಂದರೆ ಎಲೆಕ್ಟ್ರಾನಿಕ್ ಮಾಧ್ಯಮವಾದ ಮೊಬೈಲ್ ನಲ್ಲಿ ಟೆಲಿಗ್ರಾಂ ಆಪ್ ಮೂಲಕ ನಡೆಯುತ್ತಿರುವ ಆನ್ಲೈನ್ ಶಾಲೆ. ಇ- ಶಾಲೆ ಬೆಳ್ತಂಗಡಿಗೆ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರುಪಾಕ್ಷಪ್ಪನವರು ಮಾರ್ಗದರಶಕರಾಗಿದ್ದು, ಜಿಪಿಟಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರು, ಸ.ಉ.ಪ್ರಾ ಶಾಲೆ ಮಾಯ ಇಲ್ಲಿನ ಜಿಪಿಟಿ ಶಿಕ್ಷಕರೂ ಆದ ಯೋಗೇಶ ಹೆಚ್.ಆರ್ ಇದರ ಸಂಸ್ಥಾಪಕರಾಗಿದ್ದಾರೆ.

ಇ-ಶಾಲೆ ಬೆಳ್ತಂಗಡಿಯು ತಾಲೂಕಿನ ಜಿಪಿಟಿ ಶಿಕ್ಷಕರ ಸಂಘಟನೆಯ ಮುಂದಾಳತ್ವದಲ್ಲಿದ್ದರೂ ತಾಲೂಕಿನ ಟಿಜಿಟಿ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಹಾಗೂ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಗಳು ಸಹಕರಿಸುವುದು ವಿಶೇಷ.

ಇ-ಶಾಲೆ ಬೆಳ್ತಂಗಡಿಯು “ಜ್ಞಾನ ಪ್ರಸಾರಕ್ಕಾಗಿ ಇ-ವೇದಿಕೆ” ಎಂಬ ಘೋಷ ವಾಕ್ಯವನ್ನು ತನ್ನ ಧ್ಯೇಯವಾಕ್ಯವಾಗಿ ಹೊಂದಿದ್ದು, ಯಾವುದೇ ಪ್ರಚಾರಕ್ಕೆ ಕೆಲಸ ಮಾಡಿದೆ, ಜ್ಞಾನ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿದೆ.

2021 ರಲ್ಲಿ ಶಿಕ್ಷಕರ ದಿನಾಚರಣೆಯ ದಿನ 2022 ರಲ್ಲಿ ಮಕ್ಕಳ ದಿನಾಚರಣೆಯ ದಿನ 2023 ರ ಈ ಬಾರಿ ಗಾಂಧಿ ಜಯಂತಿಯ ದಿನ ಈ ವೇದಿಕೆಗೆ ತಾಲೂಕಿನ ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರ ಉಪಸ್ಥಿತಿಯ ಆನ್ಲೈನ್ ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿರೂಪಾಕ್ಷಪ್ಪನವರು ಚಾಲನೆ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಟೆಲಿಗ್ರಾಂ ಗ್ರೂಪಿನಲ್ಲಿ ಸೇರುತ್ತಿದ್ದ ವಿದ್ಯಾರ್ಥಿಗಳಲ್ಲಿ ಇ-ವೇದಿಕೆಯನ್ನು ಬಳಸಿಕೊಂಡವರು ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರ. ಏಕೆಂದರೆ ವಿದ್ಯಾರ್ಥಿಗಳ ಕೈಗೆ ಮೊಬೈಲ್ ಸಿಕ್ಕರೆ ಒಳ್ಳೆಯದನ್ನು ಕಲಿಯುವುದಕ್ಕಿಂತ ಕೆಟ್ಟದ್ದರ ಕಡೆ ಮನಸ್ಸು ವಾಲುವುದೇ ಜಾಸ್ತಿ ಇರುತ್ತದೆ. ಯುಟ್ಯೂಬ್ ಹಾಗೂ ಗೇಮ್ಸ್ ಗಳು ವಿದ್ಯಾರ್ಥಿಗಳನ್ನು ಪಾಠಗಳಿಗಿಂತ ಹೆಚ್ಚು ಆಕರ್ಷಿಸುತ್ತವೆ. ಹಾಗಾಗಿ ಇ-ಶಾಲೆ ಬೆಳ್ತಂಗಡಿ ತಂಡವು ಈ ಬಾರಿ ಒಂದು ವಿಭಿನ್ನ ರೀತಿಯ ಪ್ರಯತ್ನ ಮಾಡುತ್ತಿದ್ದು ಹಿಂದಿನಂತೆ ಶಿಕ್ಷಕರು ಆಯಾ ಶಾಲೆಯ ವಿದ್ಯಾರ್ಥಿಗಳನ್ನು ಟೆಲಿಗ್ರಾಂ ಗ್ರೂಪ್ ಗೆ ಸೇರಿಸುವ ಬದಲಾಗಿ, ಸ್ವತಃ ವಿದ್ಯಾರ್ಥಿಗಳು ಹಾಗೂ ಪೋಷಕರು ಇ-ಶಾಲೆ ಬೆಳ್ತಂಗಡಿ ಸಂಘಟಕರಿಗೆ ತಮ್ಮ ಮಾಹಿತಿಯನ್ನು ವಾಟ್ಸಪ್ ಮಾಡುವ ಜೊತೆಗೆ ಕರೆ ಮಾಡಿ ಒಪ್ಪಿಗೆ ಸೂಚಿಸಬೇಕಿತ್ತು. ಮಕ್ಕಳನ್ನು ಆನ್ಲೈನ್ ತರಬೇತಿಗೆ ನೋಂದಣಿ ಮಾಡಿಸಲು 15/09/2023 ರಿಂದ 30/09/2023 ರ ವರೆಗೆ ಹದಿನೈದು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿತ್ತು.ತದ ನಂತರ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಮತ್ತೆ ಮೂರು ದಿನಗಳ ಕಾಲ ಕಾಲಾವಕಾಶ ವಿಸ್ತರಣೆ ಮಾಡಲಾಗಿದ್ದು ದಿನಾಂಕ 07/10/2023ಕ್ಕೆ ನೋಂದಣಿ ಕಾರ್ಯ ಮುಕ್ತಾಯಗೊಳಿಸಿದ್ದು, ಇಂದಿನಿಂದ 09/10/2023 ಅಧಿಕೃತವಾಗಿ ತರಬೇತಿಯು ಪ್ರಾರಂಭಗೊಳ್ಳುತ್ತಿದೆ.

ಇ- ಶಾಲೆ ಬೆಳ್ತಂಗಡಿ ತಂಡದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶಿಕ್ಷಕರಾದ ವೀಣಾ ಶ್ಯಾನಭಾಗ ಹಳೆ ಪೇಟೆ, ತಾಲೂಕಿನ ECO ಚೇತನಾಕ್ಷಿ , ಶರತ್ ತುಳುಪುಳೆ ನಿಡ್ಲೆ, ರಾಮಕೃಷ್ಣ ಭಟ್ ಬದನಾಜೆ, ಸುರೇಶ್ ಶೆಟ್ಟಿ ಕುವೆಟ್ಟು, ಪ್ರಶಾಂತ್ ಕಾಮತ್ ಮಾಲಾಡಿ ಈ ಆರು ಮಂದಿ ವಿಷಯ ತಜ್ಞರಾಗಿ ಹಾಗೂ ಸತೀಶಾಚಾರ್ ಬರೆಂಗಾಯ, ಶ್ರೀವಿದ್ಯಾ ಕೊರೆಂಜಾ , ಸಚ್ಚಿದಾನಂದ ಹೆಗಡೆ -ಪೆರಿಂಜೆ, ಶುಭ ಕೆ ಮಾದರಿ ಶಾಲೆ ಬೆಳ್ತಂಗಡಿ, ದೇವಿಕಾ ಪೆರೋಡಿತ್ತಾಯ ಕಟ್ಟೆ, ಧವಲಾ ಕುವೆಟ್ಟು ಹಾಗೂ ಯೋಗೇಶ ಹೆಚ್.ಆರ್ ಮಾಯ ಈ ಏಳು ಮಂದಿ ಜಿಪಿಟಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಇದು ಶಾಲಾ ಅವಧಿಯ ನಂತರ ಸರ್ಕಾರಿ ಶಾಲಾ ಶಿಕ್ಷಕರು ನೀಡುತ್ತಿರುವ ಅನನ್ಯ ಸೇವೆಯಾಗಿದ್ದು, ತರಬೇತಿ ಪಡೆದ ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಲ್ಲಿ ತಿಂಗಳಿಗೆ 1000 ರೂ ನಂತೆ ವರ್ಷಕ್ಕೆ 12,000 ರೂ ದೊರೆಯುತ್ತದೆ.ಇದು ಮುಂದಿನ ವಿದ್ಯಾಭ್ಯಾಸದ 9, 10, 11 & 12 ನೇ ತರಗತಿ ವರೆಗೆ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ದೊರೆಯುವ ವಿದ್ಯಾರ್ಥಿ ವೇತನವಾಗಿದೆ.

Exit mobile version