Site icon Suddi Belthangady

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

ಬೆಳ್ತಂಗಡಿ: ಕ್ಯಾನ್ಸರ್ ರೋಗವನ್ನು ಮೊದಲ ಹಂತದಲ್ಲಿ ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದಾಗ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಆತ್ಮವಿಶ್ವಾಸ ಇದ್ದರೆ ಯಾವುದೇ ರೋಗವನ್ನು ಸಹ ಗೆಲ್ಲಬಹುದು ಎಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ.ಮ್ಯಾಥ್ಯೂ ವೆಟ್ಟಂತ್ತಡತ್ತಿಲ್ ರವರು ಅಭಿಪ್ರಾಯಪಟ್ಟರು.ಅವರು 5 ಅಕ್ಟೋಬರ್ 2023 ರಂದು ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ, ಕಾರಿತಾಸ್ ಇಂಡಿಯಾ ನವದೆಹಲಿ ಸ್ಪರ್ಶ ಕಾರ್ಯಕ್ರಮ, ಗ್ರಾಮ ಪಂಚಾಯತ್ ಕೊಕ್ಕಡ, ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡ, ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಹಾಗೂ ಅಮೂಲ್ಯ ಮಹಾಸಂಘ ನೆಲ್ಯಾಡಿ ಇವುಗಳ ಆಶ್ರಯದಲ್ಲಿ ಕೊಕ್ಕಡ ಪೇಟೆಯಲ್ಲಿ ನಡೆದ ಕ್ಯಾನ್ಸರ್ ರೋಗದ ವಿರುದ್ಧದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಟ್ರಮೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾದ ಭುವನೇಶ್ವರಿ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾಗಿರುವ ವಂದನೀಯ ಫಾ.ಬಿನೋಯಿ ಎ.ಜೆ. ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಸ್ಪರ್ಶ- ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ವಿವರಿಸಿದರು.

ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಇದರ ಅಧ್ಯಕ್ಷೆ ಡೈಸಿ ಜೋಯ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷೆ ಮಂಜುಳಾ ಜೋನ್ ಹಾಗೂ ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷೆ ಏಲಿಯಮ್ಮ ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸ್ಪರ್ಶ ಯೋಜನೆಯ ಸಂಯೋಜಕರಾದ ಸುನಿಲ್ ಗೊನ್ಸಾಲ್ವಿಸ್ ಸ್ವಾಗತಿಸಿ, ಸಂಘದ ಸದಸ್ಯೆ ಮೇರಿ ವರ್ಗೀಸ್ ಧನ್ಯವಾದವಿತ್ತರು.ಕಾರ್ಯಕರ್ತೆ ತೇಜಾವತಿ ಸಹಕರಿಸಿದರು.

ಕಾರ್ಯಕರ್ತರಾದ ಮಾರ್ಕ್ ಡಿ’ಸೋಜಾರವರು ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ನೆಲ್ಯಾಡಿ ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರ ವಿತರಿಸಲಾಯಿತು.ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗ, ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ, ಅಮೂಲ್ಯ ಮಹಾಸಂಘ ನೆಲ್ಯಾಡಿ, ಮಂಗಳೂರು ರೋಶ್ನಿ ನಿಲಯ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Exit mobile version