ಕಳೆಂಜ: ಮಿಯ್ಯಾರು-ಹೊಸಂಗಡಿ ರಸ್ತೆಯಲ್ಲಿರುವ ಬೃಹತ್ ಹೊಂಡಗಳನ್ನು ಮುಚ್ಚಿ ಕೂಡಲೇ ರಸ್ತೆ ದುರಸ್ತಿಗೊಳಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಕುದ್ರಾಯ-ಬರೆಂಗಾಯ-ಕಾಯರ್ತಡ್ಕ-ಮಿಯ್ಯಾರು-ನೆರಿಯ ಹಾದು ಹೋಗುವ ಪಿಡಬ್ಲೂಡಿ ರಸ್ತೆಯಲ್ಲಿನ ಕಳೆಂಜ ಗ್ರಾಮದ ಮರಕ್ಕಡ ಪ್ರೌಢಶಾಲೆಯ ಸಮೀಪದಿಂದ ಮಿಯ್ಯಾರು ಹೊಸಂಗಡಿವರೆಗೆ 4 ಕಿಲೋ ಮೀಟರ್ ಅಂತರದಲ್ಲಿ ರಸ್ತೆ ಸಂಪೂರ್ಣ ಹದೆಗೆಟ್ಟಿದೆ.ಅಲ್ಲದೆ ರಸ್ತೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಹೊಂಡಗಳಾಗಿದೆ. ಇದರಿಂದಾಗಿ ವಾಹನ ಸವಾರರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.ಈಗಾಗಲೇ ದ್ವಿಚಕ್ರ ವಾಹನ ಸವಾರರು ರಸ್ತೆಯ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ.
ಕಳೆದ ವರ್ಷ ಈ ರಸ್ತೆ ದುರಸ್ತಿಗೆ ಶಿಲಾನ್ಯಾಸ ಮಾಡಲಾಗಿತ್ತು. ಕಾಮಗಾರಿಗೆ ಏಳು ಕೋಟಿ ರೂ ಮಂಜೂರು ಆಗಿರುವುದಾಗಿ ಹೇಳಲಾಗಿತ್ತು. ಆದರೆ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಆದ್ದರಿಂದ ಸರಕಾರ ತಡೆಹಿಡಿದಿರುವ ಕಾಮಗಾರಿಗಳ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಿ ರಸ್ತೆ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಬ್ರಹತ್ ಪ್ರತಿಭಟನೆಗೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದೇವೆ ಎಂದು ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ ಎ.ಪಿ, ಉಮೇಶ್ ನಿಡ್ಡಾಜೆ, ರಾಜೇಶ್ ನಿಡ್ಡಾಜೆ ಮತ್ತು ನಿತಿನ್ ಅಶ್ವತ್ತಡಿ ತಿಳಿಸಿದ್ದಾರೆ.