Site icon Suddi Belthangady

ಉಜಿರೆಯಲ್ಲಿ ‘ಏಕ್ ತಾರೀಖ್, ಏಕ್ ಘಂಟಾ’ ಸ್ವಚ್ಛತಾ ಅಭಿಯಾನ

ಉಜಿರೆ: ಮಹಾತ್ಮ ಗಾಂಧೀಜಿ ಅವರ ಜಯಂತಿಯ ಅಂಗವಾಗಿ “ಏಕ್ ತಾರೀಖ್,ಏಕ್ ಘಂಟಾ ಏಕ್ ಸಾಥ್ ” ನ ಭಾಗವಾಗಿ, ಎಲ್ಲಾ ನಾಗರಿಕರು ಒಟ್ಟಾಗಿ ಬೆಳಿಗ್ಗೆ 10 ಗಂಟೆಗೆ ದೇಶಾದ್ಯಂತ ಜರುಗುವ ಒಂದು ಗಂಟೆಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ, ರಾಷ್ಟೀಯ ಯೋಜನಾ ಘಟಕದ ವತಿಯಿಂದ”ಏಕ್ ತಾರೀಖ್,ಏಕ್ ಘಂಟಾ”ಎಂಬ ಶೀರ್ಷಿಕೆಯಡಿಯಲ್ಲಿ ಅ.01ರಂದು ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಉಜಿರೆಯ ಗ್ರಾ.ಪಂ.ಉಪಾಧ್ಯಕ್ಷರಾದ ಶ್ರೀ ರವಿ ಬರಮೇಲು ರವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

“ಸ್ವಚ್ಛತೆ ಎಂದರೆ,ಮೊದಲು ನಮ್ಮ ಮನಃ ಶುದ್ಧೀಕರಿಸಿಕೊಳ್ಳಬೇಕು. ನಂತರ ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕು. ಜವಾಬ್ದಾರಿಯುತ ನಾಗರಿಕರಾಗಿ, ಸಮಾಜವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ”ಎಂದರು.

ಘಟಕದ ಸ್ವಯಂಸೇವಕರು, ಉಜಿರೆಯ ರಸ್ತೆ ಬದಿಗಳಲ್ಲಿ,ತಂಗು ನಿಲ್ದಾಣಗಳ ಬಳಿ ಬಿದ್ದಿದ್ದ ತ್ಯಾಜ್ಯವನ್ನು ಹೆಕ್ಕುವ ಮುಖಾಂತರ ಸ್ವಚ್ಚತಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಸ್ವಯಂ ಸೇವಕರಿಂದ ಒಟ್ಟು 10 ಚೀಲಗಳಷ್ಟು ಕಸ ಸಂಗ್ರಹಿಸಲಾಯಿತು.

ಎಸ್.ಡಿ.ಎಂ ಕಾಲೇಜು (ಸ್ವಾಯತ್ತ)ಉಜಿರೆಯ, ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ್ ಹೆಗ್ಡೆ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್., ಮತ್ತು ಪ್ರೋ.ದೀಪಾ ಆರ್.ಪಿ ಮಾರ್ಗದರ್ಶನ ನೀಡಿದರು. ಘಟಕದ ಕಾರ್ಯದರ್ಶಿಗಳು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿ ಸಿಂಚನಾ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.

Exit mobile version