Site icon Suddi Belthangady

ಸೌಜನ್ಯ ಪ್ರಕರಣ: ಸಿಬಿಐ ವಕೀಲ ಶಿವಾನಂದ ಪೆರ್ಲ ವಿರುದ್ಧ ವರದಿ ಪ್ರಕಟಿಸದಂತೆ ಕೋರ್ಟ್ ಆದೇಶ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ಪರ ವಾದ ಮಂಡಿಸಿದ್ದ ಹಿರಿಯ ಸರಕಾರಿ ವಕೀಲ ಬಿ. ಆರ್. ಶಿವಾನಂದ ಪೆರ್ಲರವರ ವಿರುದ್ಧ ಯಾವುದೇ ವರದಿ ಪ್ರಕಟಿಸದಂತೆ ನ್ಯಾಯಾಲಯ ಆದೇಶಿಸಿದೆ.‌

ಸಿಬಿಐ ನ್ಯಾಯವಾದಿ ಶಿವಾನಂದ ಪೆರ್ಲ ವಿರುದ್ಧ ಅವಮಾನಕಾರಿ ಹಾಗೂ ಅವಹೇಳನಕಾರಿ ವರದಿ ಅಚ್ಚು ಮಾಡಿ ಸೆಪ್ಟೆಂಬರ್ 30ರ ಸಂಚಿಕೆಯಲ್ಲಿ ಪ್ರಕಟಿಸಲು ಯತ್ನಿಸಿದ ಗಂಗಾಧರ ಪಿಲಿಯೂರು ಒಡೆತನದ ಮಂಗಳೂರಿನ ಕರಾವಳಿ ಮಾರುತ ಪತ್ರಿಕೆ ಹಾಗೂ ಪತ್ರಿಕೆಯ ಸಂಪಾದಕರು, ಪ್ರಕಾಶಕರಿಗೆ ಯಾವುದೇ ಅವಹೇಳನಕಾರಿ ವರದಿ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ನೀಡಿ ಬೆಂಗಳೂರಿನ ಅಪರ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದ್ದು ಪತ್ರಿಕೆ, ಪ್ರಕಾಶಕ- ಸಂಪಾದಕರು, ಹಾಗೂ ಮಾಲೀಕರಿಗೆ ಸಮನ್ಸ್ ಜಾರಿ ಮಾಡಿದೆ.

ಧರ್ಮಸ್ಥಳದ ಮಣ್ಣಸಂಕದಲ್ಲಿ ಹನ್ನೊಂದು ವರ್ಷದ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ವಕೀಲರು ಕೋಟಿ ಹಣ ಡೀಲ್ ಮಾಡಿ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರ ಬಿಡುಗಡೆಗೆ ಯತ್ನಿಸಿದ್ದಾರೆಂದು ಬಿಂಬಿಸುವಂತೆ ಅವಹೇಳನಕಾರಿ ಹಾಗೂ ಅವಮಾನಕಾರಿ ವರದಿ ಪ್ರಕಟಿಸಲು ಯತ್ನಿಸಿ ಈ ಬಗ್ಗೆ ಕೆಲವು ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯ ಮುಖ ಪುಟ, ವರದಿ ಅಂಶಗಳನ್ನು ಹಂಚಿ ಸೆಪ್ಟೆಂಬರ್ 30ರಂದು ಪತ್ರಿಕೆಯನ್ನು ಪ್ರಕಟಿಸಲು ಯತ್ನಿಸಿದ ಪತ್ರಿಕೆಯ ಸಂಪಾದಕ ಹಾಗೂ ಪ್ರಕಾಶಕ ಸುದೇಶ್ ಕುಮಾರ್, ಪತ್ರಿಕೆಯ ಮಾಲೀಕ ಗಂಗಾಧರ್ ಪಿಲಿಯೂರು ಹಾಗೂ ಕರಾವಳಿ ಮಾರುತ ಪತ್ರಿಕೆಯ ವಿರುದ್ಧ ಸಿ. ಬಿ.ಐ. ವಕೀಲ ಬಿ.ಆರ್. ಶಿವಾನಂದ ಪೆರ್ಲ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿ ಪತ್ರಿಕೆ ವಿರುದ್ದ ಶಾಶ್ವತ ನಿರ್ಬಂಧಕಾಜ್ಞೆ ಆದೇಶ ಕೋರಿ ಮನವಿ ಸಲ್ಲಿಸಿದ್ದರು. ಪತ್ರಿಕೆಯ ಉದ್ದೇಶಿತ ವರದಿಯಲ್ಲಿನ ಅವಮಾನಕಾರಿ, ಸುಳ್ಳು ಅಂಶಗಳು ಮತ್ತು ಯಾವೆಲ್ಲ ಕಾರಣಕ್ಕೆ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಈ ಹಿಂದೆ ಜೂನ್ ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿದೆ ಎಂಬ ಅಂಶವನ್ನು ಶಿವಾನಂದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದು ವಾದ ಮಂಡಿಸಿದ್ದರು.ಶಿವಾನಂದ ಪೆರ್ಲ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಶಿವಾನಂದ ಪೆರ್ಲ ರವರ ವಿರುದ್ಧ ಮತ್ತು ಸೌಜನ್ಯ ಪ್ರಕರಣದ ಆದೇಶವನ್ನು ಯಾವ ರೀತಿಯಲ್ಲೂ ಚರ್ಚೆ ಮಾಡಿ ವರದಿ ನೀಡದಂತೆ ತಾತ್ಕಾಲಿಕ ನಿರ್ಬಂಧಕಾಜ್ಞೆ ವಿಧಿಸಿ ಸೆಪ್ಟೆಂಬರ್ 29ರಂದು ನ್ಯಾಯಾಲಯ ಆದೇಶ ನೀಡಿದ್ದು ಪ್ರಕರಣವನ್ನು ಅ.26 ಕ್ಕೆ ಮುಂದೂಡಿದೆ. ಶಿವಾನಂದ ಪೆರ್ಲ ಪರ ನ್ಯಾಯವಾದಿ ಕೊಂಬಾರಿನ ಕೆ.ಎನ್. ಪ್ರವೀಣ್ ಕುಮಾರ್ ವಾದ ಮಂಡಿಸಿದ್ದರು.

ಸಿಬಿಐ ವಕೀಲರಾಗಿರುವ ಶಿವಾನಂದ ಪೆರ್ಲ ಅವರು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಲ್ಲಿ ಕಾನೂನು ಪದವಿ ಪಡೆದವರು.

Exit mobile version