ಬೆಳ್ತಂಗಡಿ: ಸೆ.30ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಇಲ್ಲಿನ ವಾಣಿಜ್ಯ ಸಂಘವನ್ನು ಮಂಗಳೂರಿನ ಎಂ.ಆರ್.ಪಿ.ಎಲ್.ಸಂಸ್ಥೆಯ ಆಂತರಿಕ ಲೆಕ್ಕಪರಿಶೋಧಕರಾದ ಸಿ.ಎ ಸನತ್ ಕುಮಾರ್ ನಾಯಕ್ ಇವರು ಉದ್ಘಾಟಿಸಿದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಪದವಿ ಶಿಕ್ಷಣದ ಜೊತೆಗೆ ವೃತ್ತಿಪರ ಹಾಗೂ ತಾಂತ್ರಿಕ ಪರಿಣಿತಿಯನ್ನು ಹೊಂದಿದಾಗ ಮಾತ್ರ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಾಣಿಜ್ಯ ಸಂಘದ ಪದಾಧಿಕಾರಿಗಳನ್ನು ಸಿಎ ಸನತ್ ಕುಮಾರ್ ಇವರು ಪುಷ್ಪಗುಚ್ಛವನ್ನು ನೀಡಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್ ಇವರು ವಹಿಸಿ ವಿದ್ಯಾರ್ಥಿಗಳು ನಾಜೂಕು ಮತ್ತು ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಡಾ.ಸುಬ್ರಹ್ಮಣ್ಯ ಕೆ. ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರಚುರಪಡಿಸಲು ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ವಾಣಿಜ್ಯ ಬಳಗವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಾಣಿಜ್ಯ ಸಂಘದ ಸಂಚಾಲಕರಾದ ಪ್ರೊಫೆಸರ್ ಪದ್ಮನಾಭ ಕೆ ಇವರು ವಾಣಿಜ್ಯ ಸಂಘದ ಪ್ರಾಮುಖ್ಯತೆ ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಸ್ನಾತ್ತಕೋತ್ತರ ವಿಭಾಗದ ಸಂಚಾಲಕರಾದ ಡಾ.ರವಿ ಎಂ ಎನ್ ಉಪಸ್ಥಿತರಿದ್ದರು.ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊಫೆಸರ್ ಸುರೇಶ್ ವಿ ಇವರು ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಪ್ರೊಫೆಸರ್ ನವೀನ್ ಕುಮಾರ್ ಹಾಗೂ ಪ್ರೊಫೆಸರ್ ರಾಜೇಶ್ವರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ದ್ವಿತೀಯ ಬಿಕಾಂನ ನಿವೇದಿತಾ ಮತ್ತು ತಂಡ ಪ್ರಾರ್ಥನೆಗೈದರು.ಪ್ರಥಮ ಬಿಕಾಂ ವಿದ್ಯಾರ್ಥಿನಿ ಕುಮಾರಿ ಶರಣ್ಯ ವಂದಿಸಿದರು.ತೃತೀಯ ಬಿಕಾಂನ ಅಪೇಕ್ಷ ಅತಿಥಿಗಳ ಪರಿಚಯ ನೀಡಿದರು.ಅಂತಿಮ ಬಿಕಾಂನ ಸಂಜನಾ ಮತ್ತು ದ್ವಿತೀಯ ಬಿಕಾಂನ ರಹೀನ ಕಾರ್ಯಕ್ರಮವನ್ನು ನಿರೂಪಿಸಿದರು.