ಬೆಳ್ತಂಗಡಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ಪ್ರಕರಣದ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿರುವ ಬೆಳ್ತಂಗಡಿ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ-ಮುರ ರಸ್ತೆಯ ದಂಬೆತ್ತಿಮಾರ್ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದ ಮೊಗ್ರು ಗ್ರಾಮದ ದಂಬೆತ್ತಿಮಾರ್ ನಿವಾಸಿ ಉಮೇಶ್‌ಗೆ ಬೆಳ್ತಂಗಡಿ ನ್ಯಾಯಾಲಯ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ. 2021ರ ಮೇ 5ರಂದು ಸಂಜೆ 5.30ರ ವೇಳೆಗೆ ದಂಬೆತ್ತಿಮಾರ್ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಚೀಲದಲ್ಲಿ ಮೈಸೂರು ಲಾನ್ಸರ್‌ನ 43 ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಆಗಿನ ಉಪ ನೀರಿಕ್ಷಕ ಕುಮಾರ್ ಸಿ.ಕಾಂಬಳೆ ಮತ್ತು ತಂಡದವರು ದಾಳಿ ನಡೆಸಿ ಉಮೇಶ್‌ನನ್ನು ಬಂಧಿಸಿದ್ದರು.ಬಳಿಕ ವಿಚಾರಣೆ ಪೂರ್ಣಗೊಳಿಸಿದ ಪೊಲೀಸರು ಆರೋಪಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜು ಹೆಚ್.ಎಂ. ಅವರು ಆರೋಪಿ ಉಮೇಶ್‌ಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ 2 ತಿಂಗಳು ಹೆಚ್ಚು ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಸರಕಾರದ ಪರ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದಿಸಿದ್ದರು.