Site icon Suddi Belthangady

ವೇಣೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ- ಮನವಿಪತ್ರ ಬಿಡುಗಡೆ-ಬಾಹುಬಲಿಯ ತ್ಯಾಗ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ: ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ಉಜಿರೆ: ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ತನ್ನ ಬದುಕಿನಲ್ಲಿ ಸಾಧಿಸಿ ತೋರಿಸಿದ ಭಗವಾನ್ ಬಾಹುಬಲಿಯ ತ್ಯಾಗ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಅವರು ಭಾನುವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ 2024ರ ಫೆಬ್ರವರಿ 22 ರಿಂದ ಮಾರ್ಚ್ 1ರ ವರೆಗೆ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಮನವಿಪತ್ರ ಬಿಡುಗಡೆಗೊಳಿಸಿ ಆಶೀವರ್ಚನ ನೀಡಿದರು.

ಶಿಲ್ಪಕಲಾ ವೈಭವಕ್ಕೆ ಕರ್ನಾಟಕ ರಾಜ್ಯವು ದೇಶದಲ್ಲೆ ಪ್ರಥಮ ಸ್ಥಾನ ಹೊಂದಿದೆ. ಶ್ರವಣಬೆಳಗೊಳ, ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳದಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗಳು ಆಕರ್ಷಕ ಶಿಲ್ಪಕಲಾ ವೈಭವವನ್ನೂ ಹೊಂದಿದ್ದು ಅಹಿಂಸೆ, ತ್ಯಾಗ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತವೆ.ನಮ್ಮ ಭವ್ಯ ಇತಿಹಾಸ, ಪರಂಪರೆ, ನಂಬಿಕೆ-ನಡವಳಿಕೆಗಳು, ಧಾರ್ಮಿಕ ಸಂಪ್ರದಾಯಗಳನ್ನು ಕಡೆಗಣಿಸದೆ ಶ್ರದ್ಧಾ-ಭಕ್ತಿಯಿಂದ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು. ಇದರಿಂದ ನಮ್ಮ ಜೀವನ ಪಾವನವಾಗಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಕಣ್ಮನ ಸೆಳೆಯುವ ವೇಣೂರು ಪ್ರಸಿದ್ಧ ಪ್ರವಾಸಿ ತಾಣವೂ ಆಗಿದೆ. ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸರ್ವರೂ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು.ಲೋಕಕಲ್ಯಾಣಕ್ಕಾಗಿ ನಡೆಯುವ ಮಹಾಮಸ್ತಕಾಭಿಷೇಕವನ್ನು ರಾತ್ರಿ ಸಮಯದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಮಾತನಾಡಿ, ಅಕ್ಟೋಬರ್ 16 ರಂದು ಕಾರ್ಕಳದ ಎಂ.ಎನ್. ರಾಜೇಂದ್ರಕುಮಾರ್ ಅಟ್ಟಳಿಗೆ ಮುಹೂರ್ತ ನೆರವೇರಿಸುವರು ಎಂದು ಪ್ರಕಟಿಸಿದರು.
ಉಚಿತ ವೈದ್ಯಕೀಯ ಶಿಬಿರ ಮೊದಲಾದ ಸೇವಾಕಾರ್ಯಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪಿ. ಜಯರಾಜ ಕಂಬಳಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಪ್ರಸಾದ ಅಜಿಲ, ಪಡ್ಯೋಡಿ ಗುತ್ತು ಜೀವಂಧರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ನವೀನ ಚಂದ್ರ ಬಳ್ಳಾಲ್ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.

ಪ್ರಕಟಣೆಗಳು: ಭಾರತೀಯ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಇದೇ ನವಂಬರ್ 5 ರಂದು ಭಾನುವಾರ ವೇಣೂರಿನಲ್ಲಿ ಭರತೇಶ ಸಮುದಾಯ ಭವನದಲ್ಲಿ ಮಂಗಳೂರು ವಿಭಾಗಮಟ್ಟದ ಹಿರಿಯರ ಮತ್ತು ಕಿರಿಯರ ವಿಭಗದ ಜಿನ ಭಕ್ತಿಗೀತೆಗಳ ಭಜನಾ ಸ್ಪರ್ಧೆ ನಡೆಯಲಿದೆ.ಇದೇ ಅಕ್ಟೋಬರ್ 16 ರಂದು ಸೋಮವಾರ ಮಹಾಮಸ್ತಕಾಭಿಷೇಕಕ್ಕೆ ಅಟ್ಟಳಿಗೆ ಮುಹೂರ್ತ ನಡೆಯಲಿದೆ.

Exit mobile version