ಉಜಿರೆ: ರಾಜ್ಯದೆಲ್ಲೆಡೆ ಸರಿಯಾಗಿ ಮಳೆ ಬೀಳದ ಕಾರಣ, ಎಲ್ಲಾ ಕಡೆ ನೀರಿಗೆ ಹಾಹಾಕಾರ ಉಂಟಾಗುತ್ತಿದೆ, ಭೂಮಿಯ ಅಂತರ್ಜಲ ಕುಸಿಯುತ್ತಿದೆ.ಇತ್ತೀಚೆಗೆ ರಾಜ್ಯ ಸರ್ಕಾರ ಬರಪೀಡಿತ ಪ್ರವೇಶಗಳನ್ನು ಗುರುತಿಸಿದೆ.ಈ ಹಿನ್ನಲೆಯಲ್ಲಿ ಜಲ ಸಂರಕ್ಷಣೆಯಲ್ಲಿ ಸಾರ್ವಜನಿಕರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಬೀದಿ ನಾಟಕವನ್ನು ಆಯೋಜಿಸಿತ್ತು.
“ರಾಷ್ಟ್ರೀಯ ಸೇವಾ ಯೋಜನಾ” ದಿನದ ಅಂಗವಾಗಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸಹಯೋಗದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಿಂದ ಸೆ.14, ಭಾನುವಾರದಂದು ಉಜಿರೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ “ಜಲ ಸಂರಕ್ಷಣೆ ನಮ್ಮ ಹೊಣೆ” ಎಂಬ ಶೀರ್ಷಿಕೆ ಅಡಿಯಲ್ಲಿ ಬೀದಿ ನಾಟಕವನ್ನು ನೆರೆದಿದ್ದ ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಯಿತು. ನೀರಿನ ಅಭಾವದ ಕುರಿತು ಹಾಗೂ ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವುದೇ ಈ ಬೀದಿ ನಾಟಕದ ಮುಖ್ಯ ಉದ್ದೇಶವಾಗಿತ್ತು.
ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಲ|ಉಮೇಶ್ ಶೆಟ್ಟಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಗಣೇಶ್, ಕೆ.ಎಸ್.ಆರ್.ಟಿ.ಸಿ ವಿಭಾಗದ ಟಿ.ಸಿ., ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸದಸ್ಯರುಗಳು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು, ಹಾಗೂ ನಾಗರೀಕ ಬಂಧುಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ್ ಹೆಗ್ಡೆಯವರು ಮಾರ್ಗದರ್ಶನ ಮಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್., ಕಾರ್ಯಕ್ರಮ ನಿರ್ವಹಿಸಿದರು.