Site icon Suddi Belthangady

ಬರೆಂಗಾಯ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ- 7%ಡಿವಿಡೆಂಟ್ ಹಾಗೂ 65% ಬೋನಸ್ ಘೋಷಣೆ

ಬರೆಂಗಾಯ: ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ ಮಚ್ಚಳೆ ಶ್ರೀಮತಿ ನಾಗವೇಣಿ ಅಮ್ಮ ಸಭಾಭವನ ಕಲ್ಕುಡಗುಡ್ಡೆ ಯಲ್ಲಿ ಸೆ.23ರಂದು ನಡೆಯಿತು.

ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಾಜಿ ತೋಮಸ್ ವಾರ್ಷಿಕ ವರದಿ ಮಂಡಿಸಿದರು.

ತಂದನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸಂಘದ ಬೆಳವಣಿಗೆ ಕಡಿಮೆ ಆಗಿರುವ ಹಾಲಿನ ಪ್ರಮಾನವನ್ನು ಹೆಚ್ಚಿಸುವ ಕುರಿತು ಸಂಘದ ಸದಸ್ಯರು ಮತ್ತು ಆಡಳಿತ ಮಂಡಳಿಯವರು ಸೇರಿ ಉತ್ತಮ ರೀತಿಯಲ್ಲಿ ಚರ್ಚೆ ನಡೆಸಿದರು.ಹಾಗೆಯೇ ಪಶು ವೈದ್ಯಧಿಕಾರಿ ಡಾ.ಗಣಪತಿರವರು ಉಪಸ್ಥಿತರಿದ್ದು, ಸದಸ್ಯರಿಗೆ ಹೈನುಗಾರಿಕೆಯ ಬಗ್ಗೆ ಅಂದರೆ ಕರು ಹಾಕಿದ ಹಸು ಮತ್ತು ಆಕಲಿನ ಹಾರೈಕೆಯ ಕುರಿತು ಆಕಲಿಗೆ ಗಿಣ್ಣು ಹಾಲು ಯಾವರೀತಿ ಎಷ್ಟು ನೀಡಬೇಕು ಹುಳದ ಮಾತ್ರೆ ಎಷ್ಟು ಸಮಯಕ್ಕೊಮ್ಮೆ ನೀಡಬೇಕು, ಹಾಗೆಯೇ ಕ್ಯಾಲ್ಸಿಯಂ ಹಸುವಿಗೆ ಎಷ್ಟು ಮುಖ್ಯ ಮತ್ತು ಕೊಡುವ ವಿಧಾನ,ಕರು ಹಾಕಿದ 7ತಿಂಗಳ ನಂತರ ಹಸುವಿಗೆ ನೀಡುವ ಹಿಂಡಿಯ ಪ್ರಮಾಣದ ಕುರಿತು ಹುಷಾರಿಲ್ಲದಾಗ ಮನೆ ಮದ್ದಿನ ಕುರಿತು, ಹಸುವಿಗೆ ವಿಮೆ ಎಷ್ಟು ಮುಖ್ಯ ಇವುಗಳ ಕುರಿತು ಸಮಗ್ರ ಮಾಹಿತಿ ಸದಸ್ಯರಿಗೆ ನೀಡಿದರು.

ಸಂಘದ ಹಿರಿಯ ಸದಸ್ಯೆ ಅಪ್ಪಿ ರವರಿಗೆ ಸನ್ಮಾನ: ಎಲ್ಲರಿಗೂ ಮಾದರಿಯಾಗಬಹುದಾದ ವಯಸ್ಸು 85 ರಲ್ಲೂ ಸ್ವತಃ ತಾನೇ ಶ್ರಮಪಟ್ಟು ಸಂಘಕ್ಕೆ ಹಾಲು ನೀಡುತ್ತಿರುವ ಅಪ್ಪಿ ರವರನ್ನು ಸನ್ಮಾನಿಸಲಾಯಿತು.

ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುತ್ತಿರುವ 3 ಜನ ಸದಸ್ಯರಿಗೆ ಸನ್ಮಾನ: ಪ್ರಥಮ -ಚಂದ್ರಶೇಖರ ಗೌಡ ಕಜೆ, ದ್ವಿತೀಯ -ಕಿಟ್ಟು ಕೈರೋಡಿ, ತೃತೀಯ-ವೆಂಕಪ್ಪ ಗೌಡ ಕಲ್ಲಿಮಾರು ರವರನ್ನು ಪ್ರೋತ್ಸಾಹಕರ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪ್ರಥಮ ಸ್ಥಾನ ಪಡೆದ ಚಂದ್ರಶೇಖರ ಗೌಡ ಕಜೆ ರವರು ಮಾತನಾಡಿ ಹಸು ಸಾಕಿದರೆ ಲಾಭ ಇಲ್ಲ ಎನ್ನುವ ಮನಸ್ಥಿತಿ ಬದಲಾಗಬೇಕು ನಾನು ಪ್ರಸನ್ನ ಪಿ.ಯು ಕಾಲೇಜಿನ ಪ್ರಾಂಶುಪಾಲ ಹುದ್ದೆಯಲ್ಲಿ ಇದ್ದು. ನಮ್ಮ ತೋಟದ ಮನೆಯಲ್ಲಿ ವೈಜ್ಞಾನಿಕವಾಗಿ ಹೈನುಗಾರಿಕೆ ನಡೆಸುತ್ತಿದ್ದೇನೆ.ನಮ್ಮ ಮನೆಯ ಐಶ್ವರ್ಯ ಹಟ್ಟಿ ಹೈನುಗಾರಿಕೆಯನ್ನು ಕ್ರಮಬದ್ದವಾಗಿ ಮಾಡಿದರೆ ತುಂಬಾ ಲಾಭಧಾಯಕ. ಕರುವಿನಿಂದಲೇ ಉತ್ತಮವಾಗಿ ಪೋಷಣೆ ಮಾಡಿಕೊಂಡು ಬಂದರೆ ಅದನ್ನೇ ಉತ್ತಮ ಹಾಲು ನೀಡುವ ಶ್ರೇಷ್ಠ ಹಸುವನ್ನಾಗಿ ಮಾಡಬಹುದು.ಕ್ಯಾಲ್ಸಿಯಂ ಮತ್ತು ಹಿಂಡಿ ಹಸುವಿಗೆ ಅತೀ ಮುಖ್ಯ ಹೆಚ್ಚಿನವರು ಕ್ಯಾಲ್ಸಿಯಂ ಮತ್ತೆ ಹಿಂಡಿ ಸರಿಯಾಗಿ ನೀಡದೆ ಇರುವುದೇ ಹಾಲಿನಲ್ಲಿ ಅಸಮತೋಲನ ಉಂಟಾಗಲು ಕಾರಣವಾಗುವುದು. ಹಾಗೆಯೇ ಹಸುವಿಗೆ ನೀರು 24ಗಂಟೆಯೂ ಸಮರ್ಪಕವಾಗಿ ಸಿಗುವ ತರ ನೋಡಿಕೊಳ್ಳಬೇಕು ಎಲ್ಲರು ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ನಡೆಸಿದರೆ ಉತ್ತಮ ಲಾಭ ಗಳಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು. ಕೇರಳ ಮತ್ತು ಗುಜರಾತ್ ನಲ್ಲಿ ಹಾಲಿಗೆ ಉತ್ತಮ ದರವಿದ್ದು ಇಲ್ಲಿನ 20,000 ಬೆಲೆಯ ಹಸು ಅಲ್ಲಿ 90,000ಕ್ಕೆ ಮಾರಾಟವಾಗುತ್ತಿದೆ ಆದುದರಿಂದ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಹಾಲು ಇಳಿಮುಖವಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಸುಂದರ ಗೌಡ ಕಜೆ ರವರ ಮಾತನಾಡಿ ತಾಲೂಕಿನ 4ನೇ ದೊಡ್ಡ ಶಿಥಿಲೀಕರಣ ಕೇಂದ್ರ ನಮ್ಮದು ಇತ್ತೀಚೆಗೆ ಹಾಲಿನ ಪ್ರಮಾಣ ಕಡಿಮೆಯಾಗಿದ್ದು ಹೆಚ್ಚಿಸುವ ಕುರಿತು ಚಿಂತನೆ ನಡೆಸಬೇಕು ಎಂದರು.

ಸದಸ್ಯರಿಗೆ 7%ಡಿವಿಡೆಂಟ್ ಹಾಗೂ ಹಾಲು ಉತ್ಪಾಧಕರಿಗೆ 65%ಬೋನಸ್ ನೀಡುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಪಶು ವೈಧ್ಯಾಧಿಕಾರಿ ಡಾ. ಗಣಪತಿ, ಸಂಘದ ಅಧ್ಯಕ್ಷರಾದ ಸುಂದರ ಗೌಡ ಕಜೆ, ಉಪಾಧ್ಯಕ್ಷ ಗಾಯತ್ರಿ ಹೆಚ್ ಗೌಡ, ನಿರ್ದೇಶಕರುಗಳಾದ ರುಕ್ಮಯ ಪೂಜಾರಿ, ನಿರಂಜನ್, ಚೆನ್ನಪ್ಪ ದೇವಾಡಿಗ, ಮುಕುಂದ ದೇವದಾರ್, ಶಿವಪ್ರಸಾದ್, ಹೇಮಂತ ಗೌಡ, ಅಣ್ಣುಗೌಡ, ಅಣ್ಣು, ಶ್ರೀಮತಿ ಶಶಿಕಲಾ, ಶ್ರೀಮತಿ ಗೀತಾ ಎಂ ಕೆ, ಶ್ರೀಮತಿ ಸುಮನಾ, ಮುಖ್ಯ ಕಾರ್ಯನಿರ್ವಾಹನಾಧಿಕಾರಿಯಾದ ಶಾಜಿ ತೋಮಸ್ ಉಪಸ್ಥಿತರಿದ್ದರು. ಸ್ವಾಗತವನ್ನು ರುಕ್ಮಯ ಪೂಜಾರಿ, ಪ್ರಾರ್ಥನೆಯನ್ನು ಗಾಯತ್ರಿ ಹೆಚ್ ಗೌಡ ಧನ್ಯವಾದವನ್ನು ಶಾಜಿ ತೋಮಸ್ ನೆರವೇರಿಸಿದರು.

ಸಿಬ್ಬಂದಿಗಳಾದ ಶೇಖರ್ ಗೌಡ ಮತ್ತು ಸುಪ್ರೀತಾ ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version