Site icon Suddi Belthangady

ದೊಂಡೋಲೆಯಲ್ಲಿ 73ನೇ ವರ್ಷದ ಗಣೇಶೋತ್ಸವ, ಯಕ್ಷಗಾನ ಸಾಧಕರಿಗೆ ಸನ್ಮಾನ

ಧರ್ಮಸ್ಥಳ: ದೊಂಡೋಲೆಯ ಕೆ.ಸೂರ್ಯನಾರಾಯಣ ರಾವ್ ರವರು ಆರಂಭಿಸಿ ಶಂಕರರಾಮ ರಾವ್ ಮತ್ತು ಕುಟುಂಬಸ್ಥರು ನಡೆಸಿಕೊಂಡು ಬಂದಿರುವ 73ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಿತು. ಸೆ.19ರಂದು ಬೆಳಗ್ಗೆ ಗಣಪತಿ ಪ್ರತಿಷ್ಠೆ, ನಂತರ ಮಹಾಪೂಜೆ, ಸಂಜೆ ಯಕ್ಷಗಾನ ತಾಳಮದ್ದಳೆಯ ಸಾಧಕರಿಗೆ ಸನ್ಮಾನ, ಯಕ್ಷಗಾನ ತಾಳಮದ್ದಳೆ ಹಾಗೂ ಮನೆಯವರಿಂದ ಭಜನೆ ನಡೆದು, ಸೆ.20ರಂದು ಗಣೇಶ ವಿಸರ್ಜನೆ ನೆರವೇರಿಸಲಾಗಿದೆ.

ಯಕ್ಷಗಾನದ ಸಾಧಕರಿಗೆ ಸನ್ಮಾನ: ದೊಂಡೋಲೆಯ ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್ ನಿಂದ ಇಬ್ಬರು ಯಕ್ಷಗಾನದ ಹಿರಿಯ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ಭಾಗವತರೂ, ಲೇಖಕರೂ, ಹಿಮ್ಮೆಳದಲ್ಲೂ ಸಾಧನೆ ಮೆರೆದಿರುವ ನಿವೃತ್ತ ತಹಶೀಲ್ದಾರ್ ಸುರೇಶ್ ಕುದ್ರೆಂತ್ತಾಯರವರನ್ನು ಹಾಗೂ ಸ್ವಯಂ ಕಲಿತು ಭಾಗವತಿಕೆಯಲ್ಲಿ ತೊಡಗಿಸಿಕೊಂಡು ಸುಶ್ರಾವ್ಯವಾಗಿ ಹಾಡಿ ಪ್ರಖ್ಯಾತರಾದ ಭಾಗವತರು, ಚೆಂಡೆ ಮದ್ದಳೆವಾದಕರೂ ಆಗಿರುವ ಜಯರಾಮ ಕುದ್ರೆತ್ತಾಯರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೊಂಡೋಲೆ ಮನೆಯಲ್ಲಿ ೫ ದಶಕಗಳಿಗೂ ಹೆಚ್ಚು ಕಾಲ ಗಣೇಶ ಚತುರ್ಥಿ ದಿನದ ವೈದಿಕ ಆರಾಧನೆ ಮಾಡುತ್ತಾ ಬಂದಿರುವ ವೇದಮೂರ್ತಿ ಪೊಳಲಿ ವೆಂಕಪ್ಪಯ್ಯ ಭಟ್ ರವರನ್ನು ಸನ್ಮಾನಿಸಲಾಯಿತು.

ಕೆ.ಗೋವಿಂದ ಭಟ್ ಸೂರಿಕುಮೇರುರವರಿಂದ ಸನ್ಮಾನ: ತೆಂಕುತಿಟ್ಟಿನ ಹಿರಿಯ ಕಲಾವಿದ, ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನದ ಮೇರು ಕಲಾವಿದರಾಗಿರುವ ಕೆ.ಗೋವಿಂದ ಭಟ್ ಸೂರಿ ಕುಮೇರುರವರಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.ನಂತರ ದೊಂಡೋಲೆ ಮನೆಯವರಿಂದ ಕೆ ಗೋವಿಂದಭಟ್ ಸೂರಿಕುಮೇರುರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತಾಡಿದ ಗೋವಿಂಧ ಭಟ್ ಸೂರಿಕುಮೇರು ಯಕ್ಷಗಾನದ ಕಲಾವಿದರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಿಕ್ಕ ಅವಕಾಶ, ಅಭಿನಂದನೆಗಳನ್ನು ನೆನಪಿಸಿಕೊಂಡರು. ದೊಂಡೋಲೆಯ ಚೌತಿಯ ಆರಂಭದ ದಿನಗಳು ಮತ್ತು ಯಕ್ಷಗಾನ ತಾಳಮದ್ದಳೆಯ ಕಲಾವಿದರ ಮೇಲಿನ ಮನೆಯವರ ಪ್ರೀತಿ, ಅವರ ಆದರಾಥಿತ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುರೇಶ್ ಕುದ್ರೆಂತಾಯ ಹಾಗೂ ಜಯರಾಮ ಕುದ್ರೆತ್ತಾಯರ ವ್ಯಕ್ತಿ ಪರಿಚಯವನ್ನು ಜನಾರ್ಧನ ತೋಳ್ಪಾಡಿತ್ತಾಯರವರು ನೆರವೇರಿಸಿದರು.ಹಿರಿಯ ಕಲಾವಿದ ಕೆ. ಗೋವಿಂದ ಭಟ್ ರವರ ಪರಿಚಯವನ್ನು ಉಜಿರೆ ಅಶೋಕ್ ಭಟ್ ವಿವರಿಸಿದ ರೀತಿ ಅದ್ಭುತವಾಗಿತ್ತು.ಸಮಾರಂಭದಲ್ಲಿ ತಾಳಮದ್ದಳೆಯ ಕಲಾವಿದರನ್ನು ಗುರುತಿಸಲಾಯಿತು.

ಕಾರ್ಯಕ್ರಮದಲ್ಲಿ ಶಂಕರರಾಮ ರಾವ್ ದೊಂಡೋಲೆ ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು.

ಕಮಲ ಸೂರ್ಯನಾರಾಯಣ ರಾವ್ ಚಾರಿಟೆಬಲ್ ನ ಅಧ್ಯಕ್ಷ ಪುರಂದರ ರಾವ್ ಸ್ವಾಗತಿಸಿ, ನಿಶಾಂತ್ ರವೀಂದ್ರ ರಾವ್ ಧನ್ಯವಾದವಿತ್ತರು.ವಿಷ್ಣುಪ್ರಕಾಶ್ ರವರು ನಿರೂಪಣೆ ಮಾಡಿದರು.

ಸುದ್ದಿ ನ್ಯೂಸ್ ನಲ್ಲಿ ನೇರಪ್ರಸಾರ: ದೊಂಡೋಲೆ ಚೌತಿಯ ಕಾರ್ಯಕ್ರಮ, ದಮಯಂತಿ ಸ್ವಯಂವರ ತಾಳಮದ್ದಳೆ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್‌ಚಾನೆಲ್‌ನಲ್ಲಿ ನೇರಪ್ರಸಾರವಾಗಿದೆ.ಈಗಾಗ್ಲೇ ೫ಸಾವಿರಕ್ಕೂ ಅಧಿಕ ಮಂದಿ ನೇರಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದಾರೆ.

Exit mobile version