ಕಲ್ಮಂಜ: ಸರಕಾರ,ಶಿಕ್ಷಣ ಇಲಾಖೆ ಹೊಸದಾಗಿ ಶಾಲೆಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ.ಶಾಲೆಗಳನ್ನು ಆರಂಭಿಸಿ ಬಳಿಕ ಇಲ್ಲಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಫಲವಾಗುತ್ತಿರುವುದು ಮಾತ್ರ ವಿಷಾದನೀಯ.
ಕಲ್ಮಂಜ ಸರಕಾರಿ ಪ್ರೌಢಶಾಲೆ 2006ರಲ್ಲಿ ಆರಂಭಗೊಂಡು, ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿ,2008ರಲ್ಲಿ ಎರಡು ಎಕರೆ ಜಾಗದಲ್ಲಿ ಸರಕಾರದ ಅನುದಾನದೊಂದಿಗೆ ನಿರ್ಮಾಣವಾದ 5 ಕೊಠಡಿಗಳ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಪ್ರಸ್ತುತ ಇಲ್ಲಿ 115 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈವರೆಗೆ 7 ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಗಳಿಸಿದ ಕೀರ್ತಿ ಈ ಸರಕಾರಿ ಪ್ರೌಢಶಾಲೆ ಇದೆ.ಮಕ್ಕಳಿಗೆ ಪಾಠದೊಂದಿಗೆ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ತರಕಾರಿ,ಹೂ,ಹಣ್ಣುಗಳ ತೋಟವು ರಚನೆಗೊಂಡಿದ್ದು 2022 ರಲ್ಲಿ ಅಕ್ಷರ ಕೈತೋಟ ನಿರ್ಮಾಣದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಕ್ರೀಡೆ, ಚಿತ್ರಕಲೆ,ಪ್ರತಿಭಾಕಾರಂಜಿಗಳಲ್ಲೂ ಹಲವಾರು ಪ್ರಶಸ್ತಿಗಳು ಈ ಶಾಲೆಗೆ ದೊರಕಿವೆ ಯೋಗಾಸನದಲ್ಲಿ ಇಲ್ಲಿನ ವಿದ್ಯಾರ್ಥಿಗಳ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ.
-ಮೂಲಭೂತ ಸೌಕರ್ಯ ಕೊರತೆ-
ಶಾಲೆಯು ಎಲ್ಲ ಸ್ತರಗಳಲ್ಲಿ ಮುಂಚೂಣಿಯಲ್ಲಿದ್ದರೂ ಇಲ್ಲಿ ಹಲವು ಮೂಲಭೂತಗಳ ಸೌಕರ್ಯಗಳ ಕೊರತೆ ಕೆಲವೊಂದು ಹಿನ್ನಡೆಗಳಿಗೆ ಕಾರಣವಾಗುತ್ತಿದೆ.
ಪ್ರಸ್ತುತ ಇರುವ 5 ಕೊಠಡಿಗಳ ಪೈಕಿ 3ರಲ್ಲಿ ತರಗತಿಗಳು ನಡೆಯುತ್ತಿವೆ. ಉಳಿದ ಇನ್ನೆರಡು ಕೊಠಡಿಗಳು ಶಿಕ್ಷಕರ ಕೊಠಡಿ,ಶಾಲೆಯ ಸೊತ್ತುಗಳ ದಾಸ್ತಾನು,ಕಂಪ್ಯೂಟರ್ ಇತ್ಯಾದಿಗಳಿಗೆ ಬಳಸಲಾಗಿದೆ.
ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯವಾದ ಸಭಾಂಗಣ, ಕ್ರೀಡಾಂಗಣ,ನೀರಾವರಿ ವ್ಯವಸ್ಥೆ,ಅಡುಗೆ ಕೋಣೆ,ಅಗತ್ಯ ಶೌಚಾಲಯಗಳ ವ್ಯವಸ್ಥೆಯಲ್ಲಿನ ಕೊರತೆ ಎದ್ದು ಕಾಣುತ್ತಿದೆ. 2018ರಲ್ಲಿ ನೂತನ ಕಟ್ಟಡ ನಿರ್ಮಾಣವಾದ ನಂತರ ಈ ಶಾಲೆಯ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡದಿರುವುದು ಇದಕ್ಕೆ ಕಾರಣವಾಗಿದೆ. ಬೇಸಿಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ಮಾಮೂಲಾಗಿದೆ.
-ದಾನಿಗಳ ಮೊರೆ-
ಸರಕಾರದ ಅನುದಾನವನ್ನು ಕಾದು-ಕಾದು ಸುಸ್ತಾದ ಶಾಲಾಡಳಿತ ಮಂಡಳಿ ದಾನಿಗಳ ಮೊರೆ ಹೋಗಿದ್ದು, ಸಂಘ-ಸಂಸ್ಥೆ, ಹಳೆ ವಿದ್ಯಾರ್ಥಿ,ಊರವರ ಸಹಕಾರದಲ್ಲಿ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರೂ.45 ಲಕ್ಷಗಳ ಅಂದಾಜು ಪಟ್ಟಿ ತಯಾರಿಸಿದ್ದು 25 ಲಕ್ಷ ರೂ.ವೆಚ್ಚದ ಸಭಾಂಗಣ,5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ,4 ಲಕ್ಷ ರೂ.ವೆಚ್ಚದಲ್ಲಿ ಅಡುಗೆ ಕೋಣೆ,ನೀರಾವರಿ ವ್ಯವಸ್ಥೆ, 10 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ನವೀಕರಣ,ಟೈಲ್ಸ್,ಇಂಟರ್ ಲಾಕ್ ಅಳವಡಿಕೆ, ಪೈಂಟಿಂಗ್, ಸ್ಮಾರ್ಟ್ ತರಗತಿ ಇತ್ಯಾದಿ ಸೌಕರ್ಯಗಳಿಗೆ ಯೋಜನೆ ರೂಪಿಸಲಾಗಿದೆ.
-ಸಭಾಂಗಣ ನಿರ್ಮಾಣಕ್ಕೆ ಚಾಲನೆ-
ಶಾಲೆಯ ಅಭಿವೃದ್ಧಿಯ ಪ್ರಥಮ ಹಂತವಾಗಿ 25 ಲಕ್ಷ ರೂ.ವೆಚ್ಚದಲ್ಲಿ ನೂತನ ಸಭಾಂಗಣ ರಚನೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಚಾಲನೆ ನೀಡಿ ಗರಿಷ್ಠ ಸಹಕಾರ ಒದಗಿಸುವುದಾಗಿ ತಿಳಿಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ಉಪಾಧ್ಯಕ್ಷ ಕರುಣಾಕರ ಆಚಾರ್ಯ, ಹಿರಿಯ ಕೃಷಿಕ ರತನ್ ಕುಮಾರ್, ಕಲ್ಮಂಜ ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ಪೂರ್ಣಿಮಾ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಶಿಧರ್ ಕಲ್ಮಂಜ,ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷ ವಸಂತ ಮಡಿವಾಳ, ದರ್ಣಪ್ಪ ಪೂಜಾರಿ,ಚೆನ್ನಪ್ಪ ಗೌಡ,ಮುಖ್ಯ ಶಿಕ್ಷಕಿ ಪೂರ್ಣಿಮಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.