ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸೆ.16ರಂದು ಕೊಕ್ಕಡ ಸ.ಹಿ.ಪ್ರಾ. ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಓದುವ ಲೈಬ್ರರಿ ಪುಸ್ತಕ ವಿತರಣೆ ಮಾಡಲಾಯಿತು.ಜೇಸಿ ಘಟಕಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡುತ್ತಾ ಇಂದು ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆ ಮಾಡುತ್ತಾರೆ.ಹಿಂದೆ 2000 ಇಸವಿಯ ಆಸುಪಾಸಿನಲ್ಲಿ ಮಕ್ಕಳ ಏಕಾಗ್ರತೆ 12 ಸೆಕೆಂಡುಗಳ ಕಾಲ ಇತ್ತು. ಇಂದು ಅದು 8 ಸೆಕೆಂಡುಗಳ ಅವಧಿಗೆ ಕುಸಿದಿದೆ.ಆದುದರಿಂದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಮಕ್ಕಳ ಏಕಾಗ್ರತೆ ಅವಧಿಯು ಜಾಸ್ತಿ ಆದರೆ ಶೈಕ್ಷಣಿಕ ಮಟ್ಟವು ಸಹ ಜಾಸ್ತಿ ಆಗುತ್ತದೆ. 2023 ನೇ ಸಾಲಿನಲ್ಲಿ ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ವತಿಯಿಂದ ಆಯ್ದ ಸರ್ಕಾರಿ, ಅನುದಾನಿತ ಕನ್ನಡ ಶಾಲೆಗಳ ನೂರಾರು ಮಕ್ಕಳಿಗೆ ಉಚಿತವಾಗಿ ಲೈಬ್ರರಿ ಪುಸ್ತಕ ವಿತರಿಸಲಾಗಿದೆ. ಅಕ್ಷರ ದೀವಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ ಎಲ್ಲಾ ಶಿಕ್ಷಣ ಸಂಸ್ಥೆಗಳ ಗುಣಗಾನ ಮಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಕೆ. ಅವರು ಮಾತನಾಡಿ ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಬಾಲ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೇಸಿ ಸದಸ್ಯರೂ ಶಾಲಾ ಸಹ ಶಿಕ್ಷಕಿಯರಾದ ಮನೋರಮಾ ಅವರು ಶುಭ ಹಾರೈಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಜೇಸಿ ವಾಣಿ ವಾಚಿಸಿದರು.
ಶಾಲಾ ಶಿಕ್ಷಕರಾದ ಸಿಮಿ ಕೆ, ಗೌರವ ಶಿಕ್ಷಕರಾದ ಹರ್ಷಿಣಿ, ಪ್ರಿಯಾ, ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಪ್ತಾಹದ ಯೋಜನಾ ನಿರ್ದೇಶಕರಾದ ಯು. ನರಸಿಂಹ ನಾಯಕ್ ಅವರು ವಂದಿಸಿದರು.