ಬೆಳ್ತಂಗಡಿ: ವಿರೋಧಿಗಳು ಸದ್ಭಾವನೆಗೂ ವಿರೋಧವನ್ನೇ ವ್ಯಕ್ತಪಡಿಸುತ್ತಿರುತ್ತಾರೆ. ಅದರೆಡೆಗೆ ಗಮನಹರಿಸಿದರೆ ನಮ್ಮ ಮೂಲ ಲಕ್ಷ್ಯಕ್ಕೆ ಧಕ್ಕೆಯಾಗುತ್ತದೆ.ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜನಜಾಗೃತಿ ವೇದಿಕೆ ನಡೆಸಿದ 35 ವರ್ಷಗಳ ಈ ಚಳವಳಿ ತಂದ ಪರಿವರ್ತನೆ ಅಪರಿಮಿತವಾದದ್ಧು ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.
ಎಸ್‌ಡಿಎಂ ಕಲಾಭವನ ಬೆಳ್ತಂಗಡಿಯಲ್ಲಿ ಸೆ.15 ರಂದು ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಿಶೇಷ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಜನಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.
ಅಕ್ಟೋಬರ್ 2 ಎಂದು ತಾಲೂಕು ಮಟ್ಟದ ಬೃಹತ್ ಸಮಾವೇಶ:
ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಜನಜಾಗೃತಿ ವೇದಿಕೆಯ ವತಿಯಿಂದ ತಾಲೂಕು ಮಟ್ಟದ ಬೃಹತ್ ಸಮಾವೇಶವನ್ನು ಕಿನ್ಯಮ್ಮ ಸಭಾಂಗಣದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಜ್ಞಾನವಿಕಾಸ ಮಹಿಳಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ನವಜೀವನ ಸಮಿತಿ ಸದಸ್ಯರಿಗೆ ಸನ್ಮಾನ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಗಳ ಪದಾಧಿಕಾರಿಗಳನ್ನು ಗುರುತಿಸುವುದು, ಸರ್ವಧರ್ಮೀಯ ಅತಿಥಿಗಳಿಂದ ಸಂದೇಶ ಕಾರ್ಯಕ್ರಮ ಆಯೋಜನೆ ಇತ್ಯಾಧಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜಾ, ತಾಲೂಕು ಮಾಜಿ ಅಧ್ಯಕ್ಷೆ ಶಾರದಾ ಆರ್ ರೈ ಮತ್ತು ಕಿಶೋರ್ ಹೆಗ್ಡೆ ಶುಭ ಕೋರಿದರು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಬೆಳಾಲು ತಿಮ್ಮಪ್ಪ ಗೌಡ, ಪಿ.ಕೆ ರಾಜು ಪೂಜಾರಿ, ಡಿ.ಎ ರಹಿಮಾನ್ ಮತ್ತು ಅಡೂರು ವೆಂಕಟ್ರಾಯ, ಬಂಟ್ವಾಳ ತಾಲೂಕು ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತ, ಪ್ರಗತಿ ಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷರುಗಳಾದ ಸೀತಾರಾಮ ಮತ್ತು ಸದಾನಂದ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಮಹಾಬಲ ಕುಲಾಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕೃಷಿ ಅಧಿಕಾರಿ ರಾಮ್ ಕುಮಾರ್ ಮತ್ತು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಸುರೇಂದ್ರ ಕಾರ್ಯಕ್ರಮ ನಿರ್ವಹಿಸಿದರು.ಗುರುವಾಯನಕೆರೆ ಕಚೇರಿ ಯೋಜನಾಧಿಕಾರಿ ದಯಾನಂದ ವಂದಿಸಿದರು.