ಉಜಿರೆ: ಉಜಿರೆಯಲ್ಲಿ ಪ್ರಧಾನ ಕಚೇರಿ ಹಾಗೂ ಮಡಂತ್ಯಾರಿನಲ್ಲಿ ಶಾಖೆ ಹೊಂದಿರುವ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ಮಾರ್ಚ್ ವರ್ಷಾಂತ್ಯಕ್ಕೆ ಸದಸ್ಯರಿಂದ ರೂ 96.37 ಲಕ್ಷ ಪಾಲು ಬಂಡವಾಳ ಹಾಗೂ ರೂ 58 ಕೋಟಿ ಠೇವಣಿ ಹೊಂದಿ, ರೂ .13.53 ಕೋಟಿ ಸಾಲ ವಿತರಿಸಿ, ಶೇ.99 ಸಾಲ ವಸೂಲಾತಿಯಾಗಿ ರೂ 32.30 ಲಕ್ಷ ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ನಿರ್ಧರಿಸಿದೆ. ಸಂಘವು ಎ ಶ್ರೇಣಿ ಹೊಂದಿದ್ದು,ಮುಂದಿನ ವರ್ಷ ಶೇ.100 ಸಾಲ ವಸೂಲು ಮಾಡಿ ಉತ್ತಮ ಪ್ರಗತಿ ಸಾಧಿಸುವ ಗುರಿ ಹೊಂದಿದೆ.ಸಂಘದ ಅಭಿವೃದ್ಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಹಾಗೂ ಮುಂದೆಯೂ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಗಂಗಾಧರ ರಾವ್ ಎಸ್.ನುಡಿದರು.
ಅವರು ಸೆ.10ರಂದು ಉಜಿರೆ ಶ್ರೀ ಅರಿಪ್ಪಾಡಿ ಮಠದ ಸಭಾಭವನದಲ್ಲಿ ನಡೆದ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸರ್ವರನ್ನು ಸ್ವಾಗತಿಸಿ, ಸಂಘದ ಬೆಳವಣಿಗೆಯ ಬಗೆಗೆ ಮಾತನಾಡಿದರು.ಸಲಹಾ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸಂಘ ಉತ್ತಮ ಸಾಧನೆ ಮಾಡಿದ್ದು ನಷ್ಟ ಕಡಿಮೆ ಮಾಡಲು ಚಿಂತನೆ ನಡೆಸಿದೆ. ಉತ್ಸಾಹಿ ನಿರ್ದೇಶಕರ ಪರಿಶ್ರಮ, ಸಿಬ್ಬಂದಿಗಳ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ. ಸಂಘ ಸಮಾಜಕ್ಕೆ ಮುಕುಟಪ್ರಾಯವಾಗಿ ಬೆಳೆಯಲಿ ಎಂದು ಆಶಿಸಿ ಶುಭ ಕೋರಿದರು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಹರಿಹರಾನುಗ್ರಹ ಸಭಾಭವನ ನಿರ್ಮಾಣಕ್ಕೆ ಮಾ ಡಿದ ಸಾಲದ ಕಂತು ಕ್ಲಪ್ತವಾಗಿ ಪಾವತಿಸುತ್ತಿದ್ದು, ಸಾಲದ ಬಡ್ಡಿಯಲ್ಲಿ ರಿಯಾಯಿತಿ ತೋರಬೇಕೆಂದು ಬೇಡಿಕೆ ಮಂಡಿಸಿದರು.ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ|ಎಂ.ಎಂ.ದಯಾಕರ್ ಶುಭಾಶಂಸನೆಗೈದರು.ಸಂಘದ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ನಿರ್ದೇಶಕರಿಗೆ ಸನ್ಮಾನ: ಇದೆ ಸಂದರ್ಭದಲ್ಲಿ ನಿರ್ದೇಶಕ ಸ್ಥಾನದಿಂದ ನಿವೃತ್ತ ಸಂಘದ ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರುಪ್ಪಾಡಿ, ನಿರ್ದೇಶಕರಾಗಿದ್ದ ಎಂ.ನಾರಾಯಣ ಭಟ್ ಮತ್ತು ಶ್ರೀನಿವಾಸ ಮುಚ್ಚಿನ್ನಾಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಉಪಾಧ್ಯಕ್ಷ ಚಂದ್ರಶೇಖರ ಭಟ್ ಸನ್ಮಾನ ಕಾರ್ಯಕ್ರಮ ನಿರೂಪಿಸಿದ್ದರು. ಸಂಘಕ್ಕೆ ಹೊಸದಾಗಿ ನಿರ್ದೇಶಕರಾಗಿ ಆಯ್ಕೆಯಾದ ಗೋಪಾಲಕೃಷ್ಣ ಭಟ್, ಶ್ರೀಶ ಮುಚ್ಚಿನ್ನಾಯ ಮತ್ತು ಹೃಷಿಕೇಶ್ ಒಪ್ಪಂತಾಯ ಅವರನ್ನು ಗುರುತಿಸಿ, ಗೌರವಿಸಲಾಯಿತು.
ಸಂಘದ ಕಾರ್ಯಕ್ಷೇತ್ರವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಬೇಕು, ಸಂಘದಿಂದ ಉತ್ತಮ ಗ್ರಾಹಕರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಕುರಿತು ಚಿಂತನೆ ನಡೆಸಬೇಕು, ಬಡ್ಡಿ ದರದಲ್ಲಿ ಸ್ವಲ್ಪ ಕಡಿಮೆ ಮಾಡಿ ಚಿನ್ನಾಭರಣ ಸಾಲಕ್ಕೆ ಆದ್ಯತೆ ನೀಡಬೇಕು, ಸಂಸ್ಥೆ ಹೆಚ್ಚು ಲಾಭದಾಯಕವಾಗಿ ಬೆಳೆಯಲು ನಿರ್ದೇಶಕ ಮಂಡಳಿ ಕಾರ್ಯೋನ್ಮುಖವಾಗಬೇಕು ಎಂಬ ಸಲಹೆಗಳನ್ನು ಸದಸ್ಯರಾದ ಶ್ರೀಕರ ರಾವ್, ವೆಂಕಟ್ರಮಣ ಆಚಾರ್, ಪರಾರಿ ವೆಂಕಟ್ರಮಣ ಹೆಬ್ಬಾರ್, ತಿಲಕ್ ಕೋರ್ಗಿನ್ನಾಯ, ಪುತ್ತೂರಾಯ ಮೊದಲಾದವರು ತಮ್ಮ ಅನಿಸಿಕೆ, ಅಭಿಪ್ರಾಯ ಮಂಡಿಸಿದರು.
ವೇದಿಕೆಯಲ್ಲಿ ನಿರ್ದೇಶಕರಾದ ರಾಮ ಭಟ್ ಅಲೆವೂರಾಯ, ಲಕ್ಷ್ಮೀ ನಾರಾಯಣ ಭಟ್, ಶೋಭಾ ಸುರೇಶ್, ವಿಜಯಾ ಎಚ್.ಪ್ರಸಾದ್, ಚಂದ್ರಶೇಖರ ಭಟ್ ಉಪಸ್ಥಿತರಿದ್ದರು. ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ಜಿ.ಎಂ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಹೃಷಿಕೇಶ್ ಒಪ್ಪಂತಾಯ ವಂದಿಸಿದರು.