Site icon Suddi Belthangady

ಅಳದಂಗಡಿಯ ಕಾರ್ತಿಕ್ ರೈ ಅರ್ವಗುತ್ತುರವರಿಗೆ ಎನ್‌ಎಲ್‌ಎಸ್‌ಐಯು ಕಾನೂನು ಪದವಿಯಲ್ಲಿ ರ‍್ಯಾಂಕ್

ಬೆಳ್ತಂಗಡಿ: ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಡೆಸಿದ ಅಂತಿಮ ಕಾನೂನು ಡಿಗ್ರಿ ಎನ್‌ಎಲ್‌ಎಸ್‌ಐಯು ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಅರ್ವಗುತ್ತು ಕಾರ್ತಿಕ್ ರೈ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ಎನ್.ಆರ್. ನಾಯ್ಡು ಚಿನ್ನದ ಪದಕ, ಇಂಟಲೆಕ್ಚುಯಲ್ ಪ್ರಾಪರ್ಟಿ ಲಾದಲ್ಲಿ ಪ್ರೊಫೆಸರ್ ಶಿವಶಂಕರ್ ಮೆಮೋರಿಯಲ್ ಚಿನ್ನದ ಪದಕ ಮತ್ತು ಆಡ್ಮಿನಿಸ್ಟ್ರೇಟಿವ್ ಲಾ ದಲ್ಲಿ ಆರ್.ಕೇಶವನ್ ಅಯ್ಯಂಗಾರ್ ಮೆಮೋರಿಯಲ್ ಚಿನ್ನದ ಪದಕವನ್ನೂ ಪಡೆದಿರುವ ಇವರು ಬೆಂಗಳೂರಿನ ಜಿ.ಕೆ.ವಿ.ಕೆ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಂದ ಪದವಿ ಪತ್ರ ಸ್ವೀಕರಿಸಿದರು.ಭೂತಾನಿನ ಯುವರಾಣಿ ಹಾಗೂ ಭೂತಾನ್ ಜೆಯಸ್‌ಡಬ್ಲ್ಯೂ ಲಾ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಸೊನಮ್ ದೇಚನ್ ವಾಂಗ್ಚುಕ್ ಅವರು ಚಿನ್ನದ ಪದಕಗಳನ್ನು ತೊಡಿಸಿ ಕಾರ್ತಿಕ್ ಅವರನ್ನು ಗೌರವಿಸಿದರು.

ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಎಮ್.ಕೆ. ಮಿಶ್ರಾ, ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ತಿಕ್ ರೈ ಅವರು ಪುತ್ತೂರಿನ ಬಾಲ್ಯೊಟ್ಟುಗುತ್ತು ನಿವಾಸಿಯಾಗಿರುವ ಕೆನರಾ ಬ್ಯಾಂಕ್‌ನ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಮಹಾಪ್ರಬಂಧಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಧನಂಜಯ ರೈ ಹಾಗೂ ಬೆಳ್ತಂಗಡಿಯ ಅಳದಂಗಡಿ ಅರ್ವಗುತ್ತು ಸುಜಾತ ರೈ ಅವರ ಪುತ್ರರಾಗಿದ್ದು ಕಾನೂನು ವ್ಯಾಸಂಗದ ಅವಧಿಯಲ್ಲಿ ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು. ಪ್ರಸ್ತುತ ಇವರು ಭಾರತದ ಹೆಸರಾಂತ ಕಾರ್ಪೊರೇಟ್ ಲಾ ಸಂಸ್ಥೆ ಟ್ರೈಲೀಗಲ್ ನ ಬೆಂಗಳೂರು ಕಚೇರಿಯಲ್ಲಿ ಅಸೋಸಿಯೇಟ್ ಲಾಯರ್ ಆಗಿ ಸೇವೆ ಮಾಡುತ್ತಿದ್ದು ಬೆಂಗಳೂರಿನ ಸಹಕಾರ ನಗರದಲ್ಲಿ ತಮ್ಮ ಪೋಷಕರ ಜೊತೆ ನೆಲೆಸಿದ್ದಾರೆ.

Exit mobile version