Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ಪ.ಪೂ.ಕಾಲೇಜಿನಲ್ಲಿ ಶೈಕ್ಷಣಿಕ ಸಮ್ಮೇಳನ

ಗುರುವಾಯನಕೆರೆ: ಶಿಕ್ಷಕರು ಕಾಲಕಾಲಕ್ಕೆ ಹೊಸತನಕ್ಕೆ ಒಗ್ಗಿಕೊಂಡರಷ್ಟೆ ಶಿಕ್ಷಣದ ಮೌಲ್ಯ ಪರಿಪೂರ್ಣಗೊಳ್ಳಲು ಸಾಧ್ಯ. ಹೊಸ ಹೊಸ ಆವಿಷ್ಕಾರ, ಸಂಶೋಧನೆ, ವಿಚಾರಧಾರೆಗಳು ಇಂದಿನ ಶೈಕ್ಷಣಿಕ ಕ್ಷೇತ್ರಕ್ಕೆ ಸವಾಲುಗಳಾಗಿವೆ. ಶಿಕ್ಷಕ ಹೊಸತನವನ್ನು ಅನ್ವೇಷಿಸುವ ಮೂಲಕ ಶಿಕ್ಷಕರ ಜೀವನ ಸದೃಢ ಹಾಗು ಸುಲಲಿತಗೊಳ್ಳಲು ಸಾಧ್ಯ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ ಹೇಳಿದರು.

ಸೆ.9ರಂದು ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಎಕ್ಸೆಲ್ ಪ.ಪೂ. ಕಾಲೇಜು, ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಳ್ತಂಗಡಿ ತಾಲೂಕು ಘಟಕಡಾ ಸಂಯುಕ್ತ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವೃತ್ತಿಯಿಂದ ನಿವೃತ್ತನಾಗುವವರೆಗೂ ಶಿಕ್ಷಕನಿಗೆ ತರಬೇತಿ ಅಗತ್ಯ ಎಂದು ಶಿಕ್ಷಣ ಇಲಾಖೆಯೂ ನಮಗೆ ಮನದಟ್ಟು ಮಾಡಿದೆ.ಹಾಗಾಗಿ ಹೊಸ ವಿಚಾರಗಳು ನಿರಂತರ ಕಲಿಕೆಯ ಭಾಗವಾಗಿದೆ. ಈ ನೆಲೆಯಲ್ಲಿ ಸರಕಾರಿ ಶಾಲೆ ಸದೃಢಗೊಳಿಸುವಲ್ಲಿ ರೋಟರಿ ಸಂಸ್ಥೆ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿರುವುದು ಸ್ಮರಣೀಯ.ಇದಕ್ಕೆ ಪೂರಕವಾಗಿ ಶೈಕ್ಷಣಿಕ ಸಮ್ಮೇಳನ ಎಂಬುದು ಶೈಕ್ಷಣಿಕ ವಿಷಯಗಳ ವಿಚಾರ ಮಂಥನಕ್ಕೆ ಸಮರ್ಪಕ ವೇದಿಕೆಯಾಗಿದೆ.ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಅತ್ಯುತ್ತಮವಾದುದನ್ನು ನೀಡುವುದು ನಮ್ಮ ಉದ್ದೇಶವಾಗಬೇಕು.ವಿಫಲತೆ ನಮ್ಮಲ್ಲಿ ಬರಬಾರದು, ಛಲ ಬಿಡಬಾರದು. ವೃತ್ತಿಯಲ್ಲಿ ಡೆಡಿಕೇಶನ್ ಇದ್ದಾಗ ಸಫಲತೆ ಸಾಧಿಸಲು ಸಾಧ್ಯ. ಭವ್ಯ ಭಾರತದ ಕನಸು ನನಸಾಗುವಲ್ಲಿ ಸಶಕ್ತ ವಿದ್ಯಾರ್ಥಿಗಳನ್ನು ಕೊಡುವ ಶಿಕ್ಷಣ ಸಂಸ್ಥೆಗಳು ನಮಗೆ ಅವಶ್ಯ ಬೇಕಾಗಿದೆ ಎಂದು ಹೇಳಿ ಶುಭ ಕೋರಿದರು.

ಶಿಕ್ಷಕ, ಸಾಹಿತಿ ಅರವಿಂದ ಚೊಕ್ಕಾಡಿ ವಿಷಯ ಮಂಡನೆ ಮಾಡಿದರು.ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ತುಳುಪುಳೆ, ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೊಯ್ಯೂರು, ದ.ಕ.ಜಿಲ್ಲೆ ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿ ಮಹಮ್ಮದ್ ರಿಯಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜು ಅಧ್ಯಕ್ಷ, ಕಾರ್ಯಕ್ರಮ ಸಂಯೋಜಕ ಸುಮಂತ್ ಕುಮಾರ್ ಜೈನ್ ಸ್ವಾಗತಿಸಿ, ಬೆಳಾಲು ಶ್ರೀ ಧ.ಮಂ.ಪ್ರೌ.ಶಾಲೆ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ನಿರೂಪಿಸಿ, ವಿಕಾಸ್ ರಾವ್ ಕನ್ಯಾಡಿ ವಂದಿಸಿದರು.

ಶೈಕ್ಷಣಿಕ ಗೋಷ್ಠಿಯಲ್ಲಿ ಶೈಕ್ಷಣಿಕ ಸವಾಲುಗಳು ಎಂಬ ಕುರಿತು ಶಿಕ್ಷಕ, ಸಾಹಿತಿ ಅರವಿಂದ ಚೊಕ್ಕಾಡಿ, ಶಿಕ್ಷಕರ ಸವಾಲುಗಳು ಗುಣಮಟ್ಟದ ಬೋಧನೆ ಕುರಿತು ಮಹಮ್ಮದ್ ರಿಯಾಜ್ ಹಾಗೂ ಸಹಪಠ್ಯ ಚಟುವಟಿಕೆಗಳು ಮತ್ತು ಮೌಲ್ಯ ಶಿಕ್ಷಣ ಕುರಿತು ರಾಮಕೃಷ್ಣ ಭಟ್ ಚೊಕ್ಕಾಡಿ ವಿಚಾರ ಮಂಡಿಸಿದರು.

Exit mobile version