Site icon Suddi Belthangady

ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಸಂಘ ಉದ್ಘಾಟನೆ ಹಾಗೂ ಪದಗ್ರಹಣ

ಉಜಿರೆ: ಪಾಶ್ಚಾತ್ಯ ಸಾಹಿತ್ಯದೆಡೆಗಿನ ಅತಿಯಾದ ಒಲವಿನ ಪರಿಣಾಮದಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ. ಭಾಷೆ, ಸಂಸ್ಕೃತಿಯನ್ನು ಕಲಿತು, ಉಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಕೆ. ಅಭಿಪ್ರಾಯಪಟ್ಟರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೆ.7ರಂದು ಕನ್ನಡ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿಯ ವಾಹಕವೂ ಆಗಿದೆ. ಸಾಹಿತ್ಯ, ಪರಂಪರೆ, ಸಂಸ್ಕೃತಿಯ ಕೊಂಡಿಯಾಗಿರುವ ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಅರಿತು, ಭಾಷೆಯ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

2,300 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಕಲಿಯುವುದು ನಮ್ಮ ಹೆಮ್ಮೆ.ಪ್ರಾಚೀನ ಸಾಹಿತ್ಯದ ಪದಗಳಲ್ಲಡಗಿರುವ ಅರ್ಥವನ್ನು ಹುಡುಕುವ, ಆಲೋಚಿಸುವ, ವಿಮರ್ಶಿಸುವ ಮನೋಭಾವ ನಮ್ಮಲ್ಲಿರಬೇಕು.ಅಧ್ಯಾಪಕರು ಕೂಡ ಅಧ್ಯಯನ ಶೀಲರಾಗಿ ವಿದ್ಯಾರ್ಥಿಗಳನ್ನು ಪ್ರೇರಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಿದ್ಯಾರ್ಥಿಗಳು ಓದುವ, ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿಶೇಷವಾಗಿ, ವ್ಯಾಕರಣದ ಬಗ್ಗೆ ಅಧ್ಯಯನ ಮಾಡುವ ಸಾಹಿತ್ಯದ ವಿದ್ಯಾರ್ಥಿಗಳು ಭಾಷಾ ಸ್ವಚ್ಛತೆ ಬಗ್ಗೆ ಗಮನ ಕೊಡುವುದು ಅಗತ್ಯ ಎಂದು ಸಲಹೆ ನೀಡಿದರು.

2023-24ನೇ ಸಾಲಿನ ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ನಡೆಯಿತು.ಸಂಘದ ಕಾರ್ಯದರ್ಶಿಯಾಗಿ ಜಾನ್ಹವಿ ಎಸ್., ಜತೆ ಕಾರ್ಯದರ್ಶಿಯಾಗಿ ವಿಘ್ನೇಶ ಮತ್ತು ಪದಾಧಿಕಾರಿಗಳಾಗಿ ಉಲ್ಲೇಖ, ಶಂಕರ್, ಜೀವಿತ್ ಹಾಗೂ ಅಮೃತ ನೇಮಕಗೊಂಡರು.

ವೇದಿಕೆಯಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಬೋಜಮ್ಮ ಕೆ.ಎನ್., ಕಾರ್ಯಕ್ರಮ ಸಂಯೋಜಕ ಡಾ. ರಾಜಶೇಖರ ಹಳೆಮನೆ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ನಿಶಾ ವಂದಿಸಿ, ರೇಷ್ಮಾ ನಿರೂಪಿಸಿದರು.

Exit mobile version