Site icon Suddi Belthangady

ಚಂದ್ರಯಾನ-3ರ ಯಶಸ್ಸಿನಲ್ಲಿ ಧರ್ಮಸ್ಥಳದ ಕನ್ಯಾಡಿಯ ವಾಸುದೇವ ರಾವ್-ಬಿಜೆಪಿ ಕಾರ್ಯದರ್ಶಿ ಶ್ರೀನಿವಾಸ ರಾವ್ ರವರ ಸಹೋದರನ ಸಾಧನೆ

ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿ ಗ್ರಾಮದ ದಿ|ಪಿ.ಗಣಪತಿ ರಾವ್ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಪಣಿಯಾಡಿ ವಾಸುದೇವ ರಾವ್ ಇಸ್ರೋದಲ್ಲಿ ಹಿರಿಯ ವಿಜ್ಞಾನಿ, ಚಂದ್ರಯಾನದ ಉಪಗ್ರಹ ಹೊತ್ತೊಯ್ಯಲು ಎಲ್‌ವಿಎಂ-3 ಮತ್ತು ಎಲ್ 110-10 ಎಂಬ ರಾಕೆಟ್‌ಗಳಿದ್ದು, ಈ ಪೈಕಿ ಇಂಧನ ಹಾಗೂ ಆಕ್ಸಿಜನ್ ಹೊತ್ತೊಯ್ಯುವ ಪ್ರಥಮ ಸ್ಟೇಜ್ ಎಲ್ 110-10ನ್ನು ತಯಾರಿ ಹಾಗೂ ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಈ ಬಿಡಿ ಭಾಗವನ್ನು ಬೆಂಗಳೂರು ಎಚ್ ಎಎಲ್‌ನಲ್ಲಿ ಸಿದ್ಧಪಡಿಸಿ ಇಸ್ರೋದ ತಿರುವನಂತಪುರದಲ್ಲಿ ಇರುವ ಮಹೇಂದ್ರಗಿರಿಗೆ ಕಳುಹಿಸಿಕೊಡುವ ವರೆಗಿನ ಕಾರ್ಯವನ್ನು ತನ್ನ ತಂಡದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.

ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ ಉಜಿರೆ ಎಸ್‌ಡಿಎಂನಲ್ಲಿ ಪಿಯುಸಿ ಬಳಿಕ ಮಂಗಳೂರು ಕೆಪಿಟಿ ಯಲ್ಲಿ ಡಿಪ್ಲೊಮಾ ರಾಜ್ಯಕ್ಕೆ 4ನೇ ರ್‍ಯಾಂಕ್), ಮಂಡ್ಯ ಡಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ರಾಜ್ಯಕ್ಕೆ 6ನೇ) ರ್‍ಯಾಂಕ್ ಪಡೆದು ಇಸ್ರೋದ ತ್ರಿವೆಂಡ್ರಮ್‌ನಲ್ಲಿರುವ ಮಹೇಂದ್ರಗಿರಿಗೆ ನೇಮಕಗೊಂಡಿದ್ದರು.ಇಸ್ರೋದಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದು 2024 ಆಗಸ್ಟ್‌ಗೆ ನಿವೃತ್ತರಾಗಲಿದ್ದಾರೆ.ಪತ್ನಿ ಕಾವೇರಿ ಹಾಗೂ ಎಂಜಿನಿಯರ್ ಪದವಿ ಪೂರ್ಣಗೊಳಿಸಿದ ಮೂವರು ಪುತ್ರರೊಂದಿಗೆ ಬೆಂಗಳೂರಿನಲ್ಲಿದ್ದಾರೆ.

ಕನ್ಯಾಡಿಯ ವಾಸುದೇವ ರಾವ್ ರವರು ಪ್ರಸ್ತುತ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ, ಬಿಜೆಪಿ ಬೆಳ್ತಂಗಡಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶ್ರೀನಿವಾಸ ರಾವ್ (ಪುಟಾಣಿ)ರವರ ಸಹೋದರನಾಗಿದ್ದಾರೆ.ಈ ಬಗ್ಗೆ ಶ್ರೀನಿವಾಸ್ ರಾವ್ ರವರು ಸುದ್ದಿಗೆ ಪ್ರತಿಕ್ರಿಯಿಸಿದ್ದು ಸಹೋದರನ ಸಾಧನೆ ಬಗ್ಗೆ, ಅವರ ಪರಿಶ್ರಮ ಮತ್ತು ಚಂದ್ರಯಾನದ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version