ಉಜಿರೆ: ಉಜಿರೆ ಎಸ್‌ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ 2023-24ನೇ ಸಾಲಿನ ಸ್ಪೆಕ್ಟ್ರಾ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆ.23ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ, ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದ ಉಪನ್ಯಾಸಕ ಅಮರೇಶ ಹೆಬ್ಬಾರ್ ಅವರು ಉದ್ಘಾಟನೆ ನೆರವೇರಿಸಿದರು.
ಬಳಿಕ ಅವರು ಭೌತಶಾಸ್ತ್ರದಲ್ಲಿ ಸರಳ ಯೋಜನಾ ಕಾರ್ಯಗಳ ತಯಾರಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ನಾವು ಪ್ರಯೋಗಾಲಯಕ್ಕೆ ಸೀಮಿತರಾಗದೆ, ನಮ್ಮ ದೈನಂದಿನ ಕೆಲಸಗಳಲ್ಲಿ ಉಂಟಾಗುವ ಅಡಚಣೆಗಳನ್ನು ಗುರುತಿಸಿ, ಆ ಸಮಸ್ಯೆಗಳಿಗೆ ನಾವೇ ತಂತ್ರಜ್ಞಾನದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದರಿಂದ ಯಶಸ್ಸು ಸಾಧ್ಯ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಸ್ಪೆಕ್ಟ್ರಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ತೃತೀಯ ಬಿ.ಎಸ್ಸಿ.ಯ ಚಿಟ್ಟೆ ಸಾಬ್, ಉಪಾಧ್ಯಕ್ಷ ದೀಪಾಶ್ರೀ, ಕಾರ್ಯದರ್ಶಿಯಾಗಿ ಪವನ್, ಜತೆ ಕಾರ್ಯದರ್ಶಿಯಾಗಿ ಸುಪ್ರೀತ್, ಕಾರ್ಯಕ್ರಮ ವ್ಯವಸ್ಥಾಪಕರಾಗಿ ನವ್ಯಶ್ರೀ ಹಾಗೂ ವಿಭಾಗದ ಇ-ಪತ್ರಿಕೆ ಮತ್ತು ಭಿತ್ತಿಪತ್ರಿಕೆಗಳ ಸಂಯೋಜಕರಾಗಿ ಗುರುಕಿರಣ್, ಸುಷ್ಮಾ ಮತ್ತು ಮಂಜುಪ್ರಿಯ ಆಯ್ಕೆಯಾದರು.
ನೂತನ ಅಧ್ಯಕ್ಷ ಚಿಟ್ಟೆ ಸಾಬ್ ಸಂಘದ ವಾರ್ಷಿಕ ಕಾರ್ಯಯೋಜನೆಯ ವಿವರಗಳನ್ನು ವಾಚಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಅಪೇಕ್ಷಾ ಜೈನ್ ಹಾಗೂ ನಮ್ರತಾ, ಸಿಬ್ಬಂದಿ ಯಶೋಧರ, ಗಣಿತಶಾಸ್ತ್ರ ಉಪನ್ಯಾಸಕರಾದ ಗಣೇಶ್ ನಾಯಕ್ ಹಾಗೂ ಅಕ್ಷತಾ ಬಿ. ಉಪಸ್ಥಿತರಿದ್ದರು.
ತೇಜಸ್ ಅತಿಥಿಗಳನ್ನು ಪರಿಚಯಿಸಿದರು. ಮಂಜುಪ್ರಿಯ ಸ್ವಾಗತಿಸಿ,ರಾಘವೇಂದ್ರ ನಿರೂಪಿಸಿ, ವಿಘ್ನೇಶ್ ವಂದಿಸಿದರು.